Home ಟಾಪ್ ಸುದ್ದಿಗಳು ಕಪಿಲ್ ಮಿಶ್ರಾ ವಿರುದ್ಧ ದೂರು ನೀಡಿದ್ದ ಅಧಿಕಾರಿಯ ಅಮಾನತು ಹಿಂಪಡೆದ ರಾಷ್ಟ್ರಪತಿ

ಕಪಿಲ್ ಮಿಶ್ರಾ ವಿರುದ್ಧ ದೂರು ನೀಡಿದ್ದ ಅಧಿಕಾರಿಯ ಅಮಾನತು ಹಿಂಪಡೆದ ರಾಷ್ಟ್ರಪತಿ

ಹೊಸದಿಲ್ಲಿ: 2019 ರಲ್ಲಿ ಆಮ್‌ ಆದ್ಮಿ ಪಕ್ಷದಲ್ಲಿದ್ದ ದೆಹಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಹರಿಬಿಟ್ಟಿದ್ದ ವೀಡಿಯೊ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿದ್ದಕ್ಕಾಗಿ ದೂರಸಂಪರ್ಕ ಇಲಾಖೆ ಅಧಿಕಾರಿ ಆಶಿಶ್ ಜೋಶಿ ದಂಡನೆಗೆ ಒಳಗಾಗಿದ್ದು ಅವರನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಅವರನ್ನು ಅಮಾನತುಗೊಳಿಸಿದ್ದ ಇಲಾಖೆಯ ಆದೇಶವನ್ನು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್‌ ರದ್ದುಗೊಳಿಸಿದ್ದಾರೆ.

ಇದೀಗ ಅವರನ್ನು ಮತ್ತೇ ದೂರಸಂಪರ್ಕ ಇಲಾಖೆಗೆ ನೇಮಿಸಲಾಗಿದೆ ಎಂದು ವರದಿಯಾಗಿದ್ದು, ಈ ಬಗ್ಗೆ ಅವರು ಯಾವುದೆ ಪ್ರತಿಕ್ರಿಯೆಗೆ ಸಿಗಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. 2019 ರಲ್ಲಿ ಕಪಿಲ್ ಮಿಶ್ರಾ ಅವರ ದ್ವೇಷ ಕಾರುವ ವಿಡಿಯೊ ಬಗ್ಗೆ ಆಶಿಶ್‌ ಜೋಶಿ ದೆಹಲಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.

“ದೇಶದ್ರೋಹಿಗಳ ವಿರುದ್ಧ ಯುದ್ಧ ಸಾರುವುದಾಗಿ ಅವರನ್ನು ಅವರ ಮನೆಗಳಿಂದ ಬೀದಿಗೆಳೆಯುವುದಾಗಿ” ಹೇಳುವ ಕವನವೊಂದನ್ನು ತಾವು ವಾಚಿಸುವ ವೀಡಿಯೋವನ್ನು ಮಿಶ್ರಾ ಫೆಬ್ರವರಿ 24,2019ರಂದು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದರು.

ಈ ಕವನದಲ್ಲಿ ದೇಶ್ರೋಹಿಗಳೆಂದು ಅವರು ಪತ್ರಕರ್ತೆ ಬರ್ಖಾ ದತ್ತ್, ಹೋರಾಟಗಾರರಾದ ಕವಿತಾ ಕೃಷ್ಣನ್, ಶೆಹ್ಲಾ ರಶೀದ್, ರಾಜಕಾರಣಿ ನವಜೋತ್ ಸಿಂಗ್ ಸಿದ್ದು ಹಾಗೂ ನಟ ನಾಸಿರುದ್ದೀನ್ ಶಾ ಅವರನ್ನು ಹೆಸರಿಸಿದ್ದರು. ಹಲವರು ಈ ವೀಡಿಯೋ ಕುರಿತು ಆಕ್ಷೇಪಿಸಿದ ನಂತರ ಟ್ವಿಟ್ಟರ್ ಅದನ್ನು ತೆಗೆದು ಹಾಕಿತ್ತು.

Join Whatsapp
Exit mobile version