ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ.
ಇಂದು ಮಧ್ಯಾಹ್ನ ಬಜೆಟ್ ಮಂಡಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು., ಈ ಬಾರಿ ಸೂಕ್ಷ್ಮ ಬಜೆಟ್ ಮಂಡಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಆರ್ಥಿಕತೆ ಬಹಳಷ್ಟು ಪೆಟ್ಟುಬಿದ್ದಿತ್ತು. ನೈಸರ್ಗಿಕ ವಿಕೋಪ ಹಾಗೂ ಕೋವಿಡ್ ನಿಂದ 2021 -22 ರಲ್ಲಿ ಕುಸಿತವಾಗಿತ್ತು. ಈಗ ಆರ್ಥಿಕತೆ ಸುಧಾರಿಸುತ್ತಿದೆ ಲೆಕ್ಕಾಚಾರ ಹಾಕುವುದಕ್ಕೆ ಗೊತ್ತಾಗುತ್ತಿದೆ. 2.65.720 ಕೋಟಿ ಈ ಬಾರಿಯ ಬಜೆಟ್ ಗಾತ್ರವಾಗಿದೆ. ಕಳೆದ ಬಾರಿಗಿಂತ 19,513 ಕೋಟಿ ಹೆಚ್ಚಳವಾಗಿದೆ. ಕಳೆದ ಬಾರಿಗೆ ಕಂಪೇರ್ ಮಾಡಿದರೆ, ಕ್ಯಾಪಿಟಲ್ ಎಕ್ಸ್ ಪೆಂಡಿಚರ್ ಸುಮಾರು 2700 ಕೋಟಿ ಹೆಚ್ಚಳವಾಗಿದೆ. ನಮಗೆ 67100 ಕೋಟಿ ಸಾಲ ತೆಗೆದುಕೊಳ್ಳಲು ಅವಕಾಶವಿತ್ತು. ಆದರೆ ಆರ್ಥಿಕ ಸಂಪೂನ್ಮೂಲ ಹೆಚ್ಚಳ ಮಾಡುವುದರ ಮೂಲಕ, ಖರ್ಚುಗಳನ್ನು ಕಡಿಮೆ ಮಾಡುವುದರ ಮೂಲಕ ಸುಮಾರು 4 ಕೋಟಿ ಕಡಿಮೆ ಮಾಡಿದ್ದೇವೆ. ಇದು ನಮ್ಮ ಆರ್ಥಿಕತೆ ಬಗ್ಗೆ ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ನಾವೂ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ, ಖರ್ಚುವೆಚ್ಚ ಕಡಿಮೆ ಮಾಡುವುದು ನಮ್ಮ ಮುಂದಿರುವ ಗುರಿಯಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಕೇಂದ್ರದ ಜಿಎಸ್ ಟಿ ಪರಿಹಾರವನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ನಾವೂ ಕೇಂದ್ರ ಸರ್ಕಾರಕ್ಕೆ ಕನಿಷ್ಠ ಮೂರು ವರ್ಷ ಮುಂದುವರಿಸಿ ಎಂದು ಮನವಿ ಮಾಡಿದ್ದೇವೆ. ಆಗ ಗಣನೀಯವಾಗಿ ಆರ್ಥಿಕತೆಯನ್ನು ನಾವೂ ಸುಧಾರಿಸಬಹುದು. ರೈತರಿಗೆ ಐದು ಎಕರೆವರೆಗೂ ಡೀಸೆಲ್ ಗೆ ಎಕರೆಗೆ 250 ರೂಪಾಯಿವರೆಗೂ ಸಬ್ಸಿಡಿ ನೀಡುತ್ತೇವೆ ಎಂದರು.
ಯಶಸ್ವಿನಿ ಯೋಜನೆಗೆ 3೦೦ ಕೋಟಿ ಮೀಸಲಿಟ್ಟು ರೈತರ ಆರೋಗ್ಯಕ್ಕೆ ನೆರವು ಆಗುವಂತೆ ಮಾಡಿದ್ದೇವೆ. 33 ಲಕ್ಷ ರೈತರಿಗೆ ಬಡ್ಡಿ ರಹಿತ ಸಾಲ ನೀಡುತ್ತೇವೆ. ಇದು ರೈತರಿಗೆ ನೆರವಾಗಲಿದೆ. ಇದು ಬಡವರ ಪರವಾದ, ಕಷ್ಟದಲ್ಲಿರುವವರನ್ನು ಅರಿತು ಮಾಡಿರುವ ಸೂಕ್ಷ್ಮ ಬಜೆಟ್ ಆಗಿದೆ. ರಾಜ್ಯವನ್ನು ನವಕರ್ನಾಟಕದಿಂದ ನವಭಾರತದತ್ತ ತೆಗೆದುಕೊಂಡು ಹೋಗಲು ಬೇಕಾದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಒಟ್ಟಾರೆಯಾಗಿ ಈ ಆಯವ್ಯಯವು ಸರ್ವರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಗೂ ರಾಜ್ಯದ ಎಲ್ಲಾ ಭಾಗಗಳ ಸಮಗ್ರ ಅಭಿವೃದ್ಧಿ ಒಳಗೊಳ್ಳುವ ಜೊತೆಗೆ ಕೋವಿಡ್ ನಿಂದಾದ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಸಹ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ದೀರ್ಘಕಾಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುವ ಅತ್ಯುತ್ತಮವಾದ ಆಯವ್ಯಯವಾಗಿದೆ ಎಂದು ತಿಳಿಸಿದರು.