Home ಟಾಪ್ ಸುದ್ದಿಗಳು ಪಿಲಿಕುಳ ಜೈವಿಕ ಉದ್ಯಾನವನದ ಉತ್ತಮ ನಿರ್ವಹಣೆಗೆ ಅಗತ್ಯ ತಾಂತ್ರಿಕ ರೂಪುರೇಷೆಗಳನ್ನು ರೂಪಿಸಿ: ಸಚಿವ ಭೋಸರಾಜು ಸೂಚನೆ

ಪಿಲಿಕುಳ ಜೈವಿಕ ಉದ್ಯಾನವನದ ಉತ್ತಮ ನಿರ್ವಹಣೆಗೆ ಅಗತ್ಯ ತಾಂತ್ರಿಕ ರೂಪುರೇಷೆಗಳನ್ನು ರೂಪಿಸಿ: ಸಚಿವ ಭೋಸರಾಜು ಸೂಚನೆ

ಬೆಂಗಳೂರು: ಕೇಂದ್ರ ಮೃಗಾಲಯ ಪ್ರಾಧಿಕಾರದ ಷರತ್ತುಗಳ ಅನುಗುಣವಾಗಿ ಪಿಲಿಕುಳ ಜೈವಿಕ ಉದ್ಯಾನವದ ಉತ್ತಮ ನಿರ್ವಹಣೆಗೆ ಅಗತ್ಯವಾಗಿರುವ ತಾಂತ್ರಿಕ ರೂಪುರೇಷೆಗಳನ್ನ ರೂಪಿಸುವ ನಿಟ್ಟಿನಲ್ಲಿ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟವರ ಸಭೆಯನ್ನು ಆಯೋಜಿಸುವಂತೆ ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌.ಎಸ್‌ ಬೋಸರಾಜು ಅವರು ಸೂಚನೆ ನೀಡಿದರು.

ಇಂದು ಬೆಂಗಳೂರಿನ ಬಹುಮಹಡಿ ಕಟ್ಟದಲ್ಲಿ ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ರಾಜ್ಯ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಜೈವಿಕ ಉದ್ಯಾನವದ ಮಾನ್ಯತೆಯನ್ನ ಕೆಲವು ಷರತ್ತುಗಳ ಅನುಸಾರವಾಗಿ ಕೇಂದ್ರ ಮೃಗಾಲಯ ಪ್ರಾಧಿಕಾರವು 1.12.2025 ರ ವರೆಗೆ ನವೀಕರಿಸಲಾಗಿದೆ. ಜೈವಿಕ ಉದ್ಯಾನವನದ ದಿನನಿತ್ಯದ ನಿರ್ವಹಣೆಗಾಗಿ ಅರಣ್ಯ ಇಲಾಖೆಯ ಸಹಾಯ ಪಡೆಯುವಂತೆಯೂ ಸಲಹೆಯನ್ನು ನೀಡಿದೆ. ಈ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅರಣ್ಯ ಇಲಾಖೆ, ಮಂಗಳೂರು ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಪಾಲ್ಗೊಂಡಿದ್ದರು.

ಜೈವಿಕ ಉದ್ಯಾನವನವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕುರಿತಂತೆ ಪರವಾಗಿ ಹಾಗೂ ವಿರೋಧವಾಗಿ ಹಲವಾರು ಸಲಹೆಗಳು ಸಭೆಯಲ್ಲಿ ವ್ಯಕ್ತವಾಯಿತು.

ತಾಂತ್ರಿಕ ರೂಪುರೇಷೆಗಳನ್ನ ರೂಪಿಸಿ:

ಕೇಂದ್ರ ಮೃಗಾಲಯ ಪ್ರಾಧಿಕಾರವು ಜೈವಿಕ ಉದ್ಯಾನವನದಲ್ಲಿರುವ ಪ್ರಾಣಿಗಳ ಸಮರ್ಥ ನಿರ್ವಹಣೆಗಾಗಿ ತಾಂತ್ರಿಕ ಷರತ್ತುಗಳನ್ನು ಪೂರೈಸುವಂತೆ ಸಲಹೆ ನೀಡಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪ್ರಾಧಿಕಾರದ ಮಟ್ಟದಲ್ಲಿ ವಿಸ್ತೃತ ಚರ್ಚೆಯನ್ನು ನಡೆಸುವಂತಹ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಇಲಾಖೆಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಮಂಗಳೂರಿನಲ್ಲಿ ಸಭೆಯನ್ನು ನಡೆಸುವಂತೆ ಸಚಿವರಾದ ಎನ್‌.ಎಸ್‌ ಭೋಸರಾಜು ಸೂಚನೆ ನೀಡಿದರು. ಸಭೆಯಲ್ಲಿ ಜೈವಿಕ ಉದ್ಯಾನವನದ ದಿನನಿತ್ಯದ ನಿರ್ವಹಣೆಗಾಗಿ ಅಗತ್ಯವಿರುವ ತಾಂತ್ರಿಕ ಸಹಾಯವನ್ನು ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ಪಡೆದುಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಿ ರಾಜ್ಯ ಸಲಹಾ ಸಮಿತಿಗೆ ವರದಿಯನ್ನು ಶೀಘ್ರವಾಗಿ ಸಲ್ಲಿಸುವಂತೆ ಸಚಿವರು ಸೂಚನೆ ನೀಡಿದರು.

ಪಿಲುಕುಳ ಸಮಗ್ರ ಅಭಿವೃದ್ದಿಗೆ ಒತ್ತು ನೀಡಿ:

ದಕ್ಷಿಣ ಕನ್ನಡ ಭಾಗದಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಯ ಕೇಂದ್ರವಾಗುವ ಎಲ್ಲಾ ಸಾಧ್ಯತೆಗಳನ್ನ ಪಿಲಿಕುಳ ಹೊಂದಿದೆ. ವಿಶ್ವದ ಏಕೈಕ ಕಾಳಿಂಗ ಸರ್ಪ ಸಂತಾನೋತ್ಪತ್ತಿ ಕೇಂದ್ರವಿದ್ದು, ಸಂಸ್ಕೃತಿಯನ್ನ ಬಿಂಬಿಸುವ ಕೇಂದ್ರಗಳು ಇವೆ. ಇದನ್ನ ಪ್ರಚುರ ಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಪಿಲಿಕುಳ ಅಭಿವೃದ್ದಿ ಪ್ರಾಧಿಕಾರ ಆರ್ಥಿಕವಾಗಿ ಸಬಲವಾಗುವ ನಿಟ್ಟಿನಲ್ಲಿ ಇದು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಏಕ್‌ರೂಪ್‌ ಕೌರ್‌, ಮಂಗಳೂರಿನ ಮಾಜಿ ಶಾಸಕರಾದ ಜಿ.ಆರ್‌ ಲೋಬೋ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ‌ ಐಎಫ್‌ಎಸ್‌ ಕುಮಾರ್‌ ಪುಷ್ಕರ್, ಮಂಗಳೂರಿನ ಜಿಲ್ಲಾಧಿಕಾರಿಗಳು, ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ಆಯುಕ್ತರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Join Whatsapp
Exit mobile version