ಹಾಸನ: ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸುವ ಆದೇಶ ಹೊರಡಿಸ ಲಾಗಿದ್ದು, ಹಸ್ತಾಂತರ ಮಾತ್ರ ಬಾಕಿ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಲ್ ಇನ್ಸ್ಪೆಕ್ಟರ್ ಹಂತದ ಅಧಿಕಾರಿಗಳ ತಂಡ ನಗರಕ್ಕೆ ಆಗಮಿಸಿದ್ದು, ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಎಸ್ಪಿ ಮಟ್ಟದ ಅಧಿಕಾರಿಗಳ ತಂಡ ಸಹ ಶೀಘ್ರವೇ ನಗರಕ್ಕೆ ಆಗಮಿಸಲಿದೆ ಎಂದು ತಿಳಿದು ಬಂದಿದೆ.
ಆದರೆ ಈ ಕುರಿತು ಕೇಳಲಾದ ಪ್ರಶ್ನೆಗೆ ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯಿಸಿದ ಎಸ್ಪಿ ಆರ್. ಶ್ರೀನಿವಾಸ್‌ಗೌಡ ಪ್ರಶಾಂತ್ ಹತ್ಯೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವ ಬಗ್ಗೆ ಮೇಲಧಿಕಾರಿಗಳು ತೀರ್ಮಾನ ಮಾಡಲಿದ್ದಾರೆ. ಸದ್ಯಕ್ಕೆ ನಾವೇ ವಿಚಾರಣೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪ್ರಶಾಂತ್ ಕೊಲೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ ಅವರು, ಕೃತ್ಯದಲ್ಲಿ ಸುಮಾರು 7ಮಂದಿ ಭಾಗಿಯಾಗಿದ್ದಾರೆ ಎಂಬುದು ಬಂಧಿತರು ನೀಡಿರುವ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ ಎಂದರು.
ಪ್ರಕರಣದಲ್ಲಿ ಎ-1 ಸೇರಿ ಇನ್ನೂ ಹಲವು ಆರೋಪಿಗಳನ್ನು ಬಂಧಿಸಬೇಕಿದೆ. ಪ್ರಮುಖ ಆರೋಪಿ ಸಿಕ್ಕ ನಂತರ ಇಡೀ ಘಟನೆಗೆ ಏನು ಕಾರಣ ಎಂಬುದು ತಿಳಿಯಲಿದೆ ಎಂದು ಹೇಳಿದರು.
ಹಳೇ ದ್ವೇಷ ಹಿನ್ನೆಲೆಯಲ್ಲಿ ಪ್ರಶಾಂತ್ ಅವರ ನಡೆದಿದೆ. ಪ್ರಮುಖ ಆರೋಪಿಗೆ ನಾವು ಸಹಕಾರ ನೀಡಿದ್ದೇವೆ ಎಂದು ಹಾಲಿ ಸಿಕ್ಕಿಬಿದ್ದಿರುವ ಸಂತೋಷ್ ಮತ್ತು ವಿಶ್ವ ಎಂಬ ಆರೋಪಿಗಳಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಪ್ರಶಾಂತ್‌ನನ್ನು ಕೊಲೆ ಮಾಡುವ ದಿನ ಪ್ರಮುಖ ಆರೋಪಿ ಸೇರಿ ಮೂವರು ನಗರದ ಡಬಲ್ ಟ್ಯಾಂಕ್ ರಸ್ತೆಯ ಹಳೇ ಮಟನ್ ಮಾರ್ಕೆಟ್ ಬಳಿ ಇರುವ ಲಕ್ಷ್ಮೀ ರೆಸಿಡೆನ್ಸಿಯಲ್ಲಿ ತಂಗಿದ್ದರು. ಬಂಧಿತ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಪ್ರಕರಣದ ತನಿಖಾಧಿಕಾರಿ ನೇತೃತ್ವದ ತಂಡ ಸೋಮವಾರ ಸಂಜೆ ಲಾಡ್ಜ್ ಗೆ ತೆರಳಿ ಸಿಸಿ ಟಿವಿ ಪರಿಶೀಲಿಸಿತು.ಈ ವೇಳೆ ಕೃತ್ಯಕ್ಕೂ ಮುನ್ನ ಆರೋಪಿಗಳು ಇಲ್ಲಿ ತಂಗಿರುವುದು ಖಾತ್ರಿಯಾಗಿದೆ. ಈ ಹಿನ್ನೆಲೆಯಲ್ಲಿ ಲಾಡ್ಜ್ ನಲ್ಲಿದ್ದ ಎಲ್ಲರನ್ನೂ ಖಾಲಿ ಮಾಡಿಸಿ ಬೀಗ ಜಡಿಯಲಾಗಿದೆ.