ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನವನ್ನು ಸಂಘಪರಿವಾರದ ಸಂಘಟನೆಗಳು ವಿವಾದ ಮಾಡುತ್ತಿದ್ದು, ಈ ಸ್ಥಳ ಸಾರ್ವಜನಿಕರಿಗೆ ಸೇರಿದ್ದು, ಹಿಂದೂಗಳಿಗೂ ವಿವಿಧ ಆಚರಣೆಗೆ ಅವಕಾಶ ನೀಡುವಂತೆ ಹಿಂದೂ ಸಂಘಟನೆಗಳು ಗದ್ದಲ ಎಬ್ಬಿಸಿ ಮತ್ತಷ್ಟು ವಿವಾದ ಸೃಷ್ಠಿ ಮಾಡಿತ್ತು. ಅಲ್ಲದೆ, ಈದ್ಗಾ ಮೈದಾನ ಬಿಬಿಎಂಪಿ ಆಸ್ತಿ ಎಂದಿತ್ತು. ಇದೀಗ ಈದ್ಗಾ ಮೈದಾನ ಬಿಬಿಎಂಪಿ ಆಸ್ತಿಯಲ್ಲ, ವಕ್ಫ್ ಬೋರ್ಡ್ ಆಸ್ತಿ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ, ಈದ್ಗಾ ಮೈದಾನವನ್ನು ಈ ಹಿಂದಿನಿಂದಲೂ ಮುಸ್ಲಿಂ ಸಮುದಾಯದವರು ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಅಲ್ಲಿ ಕುರಿ ಮಾರಾಟ ಜಾತ್ರೆ ಕೂಡ ನಡೆಯುತ್ತದೆ. ಮುಸ್ಲಿಂ ಸಂಪ್ರದಾಯದ ವಿವಿಧ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುತ್ತದೆ ಎಂದರು.
ಈದ್ಗಾ ಮೈದಾನ ಸಂಬಂಧ 1959ರಲ್ಲಿಯೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅದು ಸಾರ್ವಜನಿಕರ ಆಸ್ತಿಯಲ್ಲ. ವಕ್ಫ್ ಬೋರ್ಡ್ ಆಸ್ತಿ ಎಂದಿದೆ. ಆ ದಾಖಲೆ ನಮ್ಮ ಬಳಿಯಲ್ಲಿ ಇದೆ. ಹೀಗಾಗಿ ಅದು ಬಿಬಿಎಂಪಿ ಆಸ್ತಿಯಲ್ಲ, ವಕ್ಫ್ ಬೋರ್ಡ್ ಆಸ್ತಿ ಎಂಬುದಾಗಿ ಶಾಫಿ ಸಅದಿ ಸ್ಪಷ್ಟ ಪಡಿಸಿದರು.