ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಅವರ ಆಪ್ತರಾದ ಶರತ್ ಹಾಗೂ ಕಿರಣ್ ಒಡೆತನದ ಹೋಟೆಲ್, ಬಾರ್ ಗಳ ಮೇಲೆ ದಾಳಿ ನಡೆಸಿದ್ದಾರೆ.
ಶರತ್ ಒಡೆತನದ ಕ್ವಾಲಿಟಿ ಬಾರ್ ಹಾಗೂ ಕಿರಣ್ ಒಡೆತನದ ಶ್ರೀಕೃಷ್ಣ ಹೋಟೆಲ್ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಈ ಮಧ್ಯೆ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರಾದ ಚೇತನ್ ಹಾಗೂ ಲಿಖಿತ್ ಗೌಡ ಪರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.
ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್‌ಡ್ರೈವ್ ಇಟ್ಟುಕೊಂಡಿದ್ದ ಆರೋಪದ ಮೇರೆಗೆ ವಿಶೇಷ ತನಿಖಾ ದಳ ಮೇ 12ರಂದು ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರಾದ ಚೇತನ್ ಹಾಗೂ ಲಿಖಿತ್ ಗೌಡನನ್ನು ವಶಕ್ಕೆ ಪಡೆಯಲಾಗಿತ್ತು. ಇಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ.