ಬೆಂಗಳೂರು: ರಾಜ್ಯ ಸರ್ಕಾರದ ವಿದ್ಯುತ್ ನೌಕರರ ವಿರೋಧಿ ಧೋರಣೆ ಹಾಗೂ ವೇತನ ಪರಿಷ್ಕರಣೆ ಕುರಿತು ಹೊಂದಿರುವ ವಿಳಂಬ ಧೋರಣೆ, ತ್ರಿಪಕ್ಷೀಯ ಒಪ್ಪಂದದ ಉಲಂಘನೆ ವಿರೋಧಿಸಿ ಇದೇ 16ರಂದು ಕರ್ನಾಟಕ ವಿದ್ಯುತ್ ನೌಕರರ ಸಂಘ ಮತ್ತು ಸಂಸ್ಥೆಗಳ ಒಕ್ಕೂಟ ಸೇರಿದಂತೆ ಸಮಸ್ತ ನೌಕರರ ಸಂಘಟನೆಗಳ ಸದಸ್ಯರು ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಮಷ್ಕರ ನಡೆಸಲಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಆರ್.ಎಚ್.ಲಕ್ಷ್ಮೀಪತಿ ತಿಳಿಸಿದ್ದಾರೆ.
ಈ ಕುರಿತಂತೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 9ರಂದು ನಡೆದ ಮಂಡಳಿ ಸಭೆಯಲ್ಲಿ ನೌಕರರು, ಅಧಿಕಾರಿ ವರ್ಗಕ್ಕೆ ಶೇ. 22ರಷ್ಟು ವೇತನ, ಪಿಂಚಣಿ ಮತ್ತು ಇತರ ಭತ್ಯೆಗಳನ್ನು ಪರಿಷ್ಕರಣೆ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಇದಕ್ಕೆ ಇಂಧನ ಸಚಿವರು ಸಹ ಒಪ್ಪಿಗೆ ಸೂಚಿಸಿದ್ದರು. ಸಕಾಲದಲ್ಲಿ ಈ ಮಂಜೂರಾತಿ ಆದೇಶವನ್ನು ಹೊರಡಿಸಲಾಗದ ಕುರಿತು ಇಂಧನ ಸಚಿವರನ್ನು ಪ್ರಶ್ನಿಸಿದಾಗ 2022ಮೇ ತಿಂಗಳೊಳಗೆ ಹೊರಡಿಸುವುದಾಗಿ ಭರವಸೆ ನೀಡಿದ್ದರು. ನಿಗಮದ ಕಚೇರಿಯಿಂದ ರಾಜ್ಯ ಸರ್ಕಾರದ ಒಪ್ಪಿಗೆಗಾಗಿ ಮಂಜೂರಾತಿ ಕೋರಿ ಐದಾರು ತಿಂಗಳಾದರೂ ಇದುವರೆಗೂ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಇಲ್ಲ. ಈ ಹಿನ್ನೆಲೆಯಲ್ಲಿ ನೌಕರರೆಲ್ಲಾ ನಿರಾಶರಾಗಿ ಮುಷ್ಕರ ಕೈಗೊಳ್ಳುವುದಾಗಿ ತಿಳಿಸಿದರು.
ನಿಗದಿತ ವೇಳೆಯಲ್ಲಿ ಕಾರ್ಯನಿರ್ವಹಿಸುವ ರಾಜ್ಯ ಸರ್ಕಾರಿ ನೌಕರರಿಗೆ ಶೇ. 17ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ ವಿದ್ಯುತ್ ಇಲಾಖೆಯ ನೌಕರರು ಮತ್ತು ಕಾರ್ಮಿಕರು ದಿನಕ್ಕೆ ಎಂಟು ಗಂಟೆ ಹಾಗೂ ಬೇರೆ ಕ್ಷೇತ್ರಗಳಲ್ಲಿ ಬಹುತೇಕ ನೌಕರರು ಸಮಯದ ಮಿತಿಯಿಲ್ಲದೇ ಮಳೆ ಬಿಸಿಲೆನ್ನದೆ ಅಪಾಯಕಾರಿ ಕೆಲಸದಲ್ಲಿ ಕಾರ್ಯನಿರ್ವಹಿಸುತ್ತಾರೆ. ವಿದ್ಯುತ್ ಅಪಘಾತಗಳಿಂದ 400 ನೌಕರರು ಸಾವನ್ನಪ್ಪಿದ್ದಾರೆ. ಬೇರೆ ನೌಕರರಿಗೆ ಇವರನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ತಕ್ಷಣ ವಿದ್ಯುತ್ ನೌಕರರ ಅಳಲನ್ನು ಅರ್ಥ ಮಾಡಿಕೊಂಡು ನಿಗಮ ಮಂಡಳಿಯ ನಡಾವಳಿಯಂತೆ ವೇತನ ಪರಿಷ್ಕರಣೆಗೆ ಮಂಜೂರಾತಿ ಆದೇಶ ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಬಲರಾಮ್, ಕೆಇಬಿ ಇಂಜಿನಿಯರ್’ಗಳ ಸಂಘದ ಮಹಾ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಎಸ್.ಸಿ.ಎಸ್.ಟಿ ಕಲ್ಯಾಣ ಸಂಘದ ಅಧ್ಯಕ್ಷ ಕೆ.ದಾಸ ಪ್ರಕಾಶ್, ಕೇಂದ್ರ ಸಂಘದ ಸದಸ್ಯ ಗೋವಿಂದ ಸ್ವಾಮಿ ಮತ್ತಿತರರು ಹಾಜರಿದ್ದರು.