Home ಕರಾವಳಿ ‘ದಕ್ಷಿಣ ಕನ್ನಡದ ತೆರಿಗೆ ಮುಸ್ಲಿಮರ ಮನೆಗೆ’ ಪೋಸ್ಟ್: ಹರೀಶ್ ಪೂಂಜಾ ಜನಪ್ರತಿನಿಧಿಯಾಗಲು ನಾಲಾಯಕ್: SDPI

‘ದಕ್ಷಿಣ ಕನ್ನಡದ ತೆರಿಗೆ ಮುಸ್ಲಿಮರ ಮನೆಗೆ’ ಪೋಸ್ಟ್: ಹರೀಶ್ ಪೂಂಜಾ ಜನಪ್ರತಿನಿಧಿಯಾಗಲು ನಾಲಾಯಕ್: SDPI

ಬೆಳ್ತಂಗಡಿ : ಬಜೆಟ್ ಮಂಡನೆಯ ವಿಚಾರವಾಗಿ ಬಿಜೆಪಿ ವಿಧಾನಸೌಧದ ಹೊರಗೆ ಪ್ರತಿಭಟನೆಯ ಸಂದರ್ಭದಲ್ಲಿ ಬೆಳ್ತಂಗಡಿ ಕ್ಷೇತ್ರ ಶಾಸಕ ಹರೀಶ್ ಪೂಂಜಾ “ದಕ್ಷಿಣ ಕನ್ನಡದ ತೆರಿಗೆ ಮುಸ್ಲಿಮರ ಮನೆಗೆ” ಎಂದು ವಿವಾದಾತ್ಮಕ ಪೋಸ್ಟರ್ ಪ್ರದರ್ಶಿಸಿದ್ದು ಸಂವಿಧಾನ ಬಾಹಿರವಾಗಿದೆ. ಇಂತಹ ಕೋಮುವಾದಿ ಮನಸ್ಥಿತಿಯವರು ಜನಪ್ರತಿನಿಧಿಯಾಗಲು ನಾಲಾಯಾಕ್ ಎಂದು SDPI ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು, ಬಜೆಟ್ ಬಳಿಕ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ ಇಂತಹ ಕೋಮು ಭಾವನೆ ಕೆರಳಿಸುವ ಪೋಸ್ಟರ್ ಪ್ರದರ್ಶಿಸಿದ್ದು ಖಂಡನೀಯ. ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳಿಂದ ಪ್ರಸಿದ್ಧಿ ಪಡೆದಿರುವ ಈ ಶಾಸಕ ಕೋಮು ಹೇಳಿಕೆಗಳಿಂದ ಕುಪ್ರಸಿದ್ಧಿ ಪಡೆದಿರುವ ಹರಕಲು ಬಾಯಿ ಈಶ್ವರಪ್ಪ ಹಾಗೂ ಸಿಟಿ ರವಿಯನ್ನು ಓವರ್‌ಟೇಕ್ ಮಾಡುವ ಯೋಜನೆಯಲ್ಲಿ ಇದ್ದಾರೆಂದು ವ್ಯಂಗ್ಯವಾಡಿದ್ದಾರೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಕಡೆಯು ಬಿಜೆಪಿ ನಾಯಕರು ಕೋಮು ಭಾವನೆ ಕೆರಳಿಸಿ ಗಲಭೆ ನಡೆಸುವ ಹುನ್ನಾರ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಅದರ ಏಜೆಂಟ್‌ಗಳಾಗಿ ಸ್ವತಃ ಬಿಜೆಪಿ ಶಾಸಕರುಗಳೇ ಕೋಮು ದ್ವೇಷವನ್ನು ಹರಡಿ ಮುಂಬರುವ ಚುನಾವಣೆಯಲ್ಲಿ ಅದರ ಲಾಭ ಪಡೆಯುವ ದುಷ್ಟ ಯೋಜನೆ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ‌.

ಕೆಲವು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಶಾಲೆಯಲ್ಲಿ ಇದೇ ರೀತಿ ಮಂಗಳೂರು ಕ್ಷೇತ್ರ ಶಾಸಕರು ಶಾಲಾ ಶಿಕ್ಷಕರನ್ನು ನಿಂದಿಸಿದ್ದು ಈಗಾಗಲೇ ಎಲ್ಲಾ ಮಾಧ್ಯಮದಲ್ಲಿ ಬಂದಿದೆ. ಇದಕ್ಕೆ ಪೂರಕ ಎಂಬಂತೆ ಬೆಳ್ತಂಗಡಿ ಶಾಸಕರು ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿ ಶಾಂತಿ ಸುವ್ಯವಸ್ಥೆ ಹದಗೆಡಲು ಪಣತೊಟ್ಟವರಂತೆ ವರ್ತಿಸುತ್ತಿದ್ದಾರೆ. ಸರ್ಕಾರ ಇಂತಹ ಶಾಸಕರ ವಿರುದ್ಧ ಮೃದು ಧೋರಣೆ ತೋರುತ್ತಿರುವ ಕಾರಣದಿಂದಲೇ ನಿರಂತರವಾಗಿ ಇದನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅಕ್ಬರ್ ಬೆಳ್ತಂಗಡಿ, ಇಂಥವರ ವಿರುದ್ಧ ಸರ್ಕಾರ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಬಜೆಟ್ ಮಂಡನೆ ವೇಳೆ ಸಭಾತ್ಯಾಗ ಮಾಡಿದ ಬಿಜೆಪಿ ನಾಯಕರು ಸಿಎಂ ಮಂಡಿಸಿರುವ ಬಜೆಟ್ ಕಳಪೆ ಬಜೆಟ್, ರಾಜ್ಯದ ಜನರಿಗೆ ಮೋಸವಾಗಿದೆ. ಇದರಲ್ಲಿ ಯಾವುದೇ ಹೊಸ ಯೋಜನೆಗಳಿಲ್ಲ ಎಂದು ಪ್ರತಿಭಟನೆ ನಡೆಸಿದರು. ಬಿಜೆಪಿ ನಾಯಕರ ಕೈಗಳಲ್ಲಿ ‘ನಮ್ಮ ತೆರಿಗೆ ನಮ್ಮ ಹಕ್ಕು’ ‘ನಮ್ಮ ತೆರಿಗೆ ನಮಗೆ ಕೊಡಿ’ ‘ದಕ್ಷಿಣ ಕನ್ನಡದ ತೆರಿಗೆ ದಕ್ಷಿಣ ಕನ್ನಡಕ್ಕೆ ನೀಡಿ’ ಮುಂತಾದ ಪೋಸ್ಟ್‌ಗಳಿದ್ದರೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ‘ದಕ್ಷಿಣ ಕನ್ನಡದ ತೆರಿಗೆ ಮುಸ್ಲಿಮರ ಮನೆಗೆ’ ಎಂಬ ಪೋಸ್ಟ್ ಹಿಡಿದುಕೊಂಡಿದ್ದರು. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿಯೂ ಇದನ್ನೇ ಪೋಸ್ಟ್ ಮಾಡಿದ್ದರು.

Join Whatsapp
Exit mobile version