ಕೋಝಿಕ್ಕೋಡ್: ಭಾರತೀಯ ಸಂವಿಧಾನದಲ್ಲಿ ಅಳವಡಿಸಲಾಗಿರುವ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪುನಃಸ್ಥಾಪಿಸಬೇಕೆಂದು ಕೇರಳದ ಮಲಬಾರ್ ಹೌಸ್ ನಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯು ಬಿಜೆಪಿ ನೇತೃತ್ವದ ಒಕ್ಕೂಟ ಸರಕಾರವನ್ನು ಆಗ್ರಹಿಸಿದೆ.
2016ರಿಂದ ಬಿಜೆಪಿ ಸರಕಾರದಡಿಯಲ್ಲಿ, ಭಾರತವನ್ನು ಜಾತ್ಯತೀತತೆ ಮತ್ತು ಎಲ್ಲರನ್ನೊಳಗೊಂಡ ಸಂವಿಧಾನಿಕ ತತ್ವಗಳಿಂದ ದೂರ ಸರಿಸಲಾಗುತ್ತಿದೆ ಮತ್ತು ನಮ್ಮ ರಾಷ್ಟ್ರೀಯ ಆಂದೋಲನದೊಂದಿಗೆ ಯಾವುದೇ ಸಂಬಂಧ ಹೊಂದಿರದ ಹಿಂದುತ್ವ ಅಜೆಂಡಾವನ್ನು ಅನುಷ್ಠಾನಗಳಿಸಲು ಪ್ರಯತ್ನಿಸಲಾಗುತ್ತಿದೆ.
ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಪಾಸು ಮಾಡಿದ ನಿರ್ಣಯವೊಂದು, ಪ್ರಧಾನಿ ನರೇಂದ್ರ ಮೋದಿಯವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣವು ದೇಶದ ಜನತೆಯ ಸುತ್ತಮುತ್ತ ಇರುವ ನೆಲದ ವಾಸ್ತವಗಳಿಗೆ ಬಹಳಷ್ಟು ದೂರವಿತ್ತು ಎಂದು ಹೇಳಿದೆ. 76ನೇ ಸ್ವಾತಂತ್ರ್ಯ ದಿನದ ಸಂದರ್ಭದ ಪ್ರಧಾನಿಯವರ ಭಾಷಣ ತೀರಾ ನಿರಾಶಾದಾಯಕವಾಗಿತ್ತೇ ವಿನಃ ಅದರಲ್ಲಿ ಜನರಿಗೆ ವಿಶೇಷವಾದುದು ಏನೂ ಇರಲಿಲ್ಲ. ಬೆಲೆ ಏರಿಕೆ, ಬಡತನ, ನಿರುದ್ಯೋಗ ಮತ್ತು ಹೆಚ್ಚುತ್ತಿರುವ ಕೋಮು ದ್ವೇಷಗಳು ಜನರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಸರಕಾರದ ಮುಖ್ಯಸ್ಥನಾಗಿರುವ ನಿಟ್ಟಿನಲ್ಲಿ ಪ್ರಧಾನಿಯವರು, ಜನರ ಜೀವನ ಅಭಿವೃದ್ಧಿ ಪಡಿಸಲು ಮತ್ತು ದೇಶದ ಸ್ಥಿತಿಗತಿಯನ್ನು ಬದಲಾಯಿಸಲು ಕ್ರಮಕೈಗೊಳ್ಳಬೇಕಾಗಿತ್ತೇ ವಿನಃ ಚಮತ್ಕಾರಿಕ ಮತ್ತು ಸುಳ್ಳು ಮಾತುಗಳ ಮೊರೆ ಹೋಗಬಾರದಿತ್ತು ಎಂದು ಎನ್.ಇ.ಸಿ ಹೇಳಿದೆ. ಸಮಾಜದಲ್ಲಿ ಸಹಿಷ್ಣುತೆಯ ವಾತಾವರಣ ಸೃಷ್ಟಿಯಾಗದೆ ಮತ್ತು ಸರಕಾರವು ಎಲ್ಲರನ್ನೊಳಗೊಂಡ ನೀತಿ ಪಾಲಿಸದೇ, 2047ರ ವರೆಗೆ ಭಾರತವನ್ನು ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ವಿಶ್ವಕ್ಕೆ ಮಾರ್ಗದರ್ಶನ ನೀಡುವ ಅತ್ಯಂತ ಪ್ರಬಲ ರಾಷ್ಟ್ರವನ್ನಾಗಿ ಮಾರ್ಪಡಿಸುವ ಕನಸು ನನಸಾಗಲು ಸಾಧ್ಯವಿಲ್ಲ ಎಂಬ ವಿಚಾರದ ಬಗ್ಗೆ ಎನ್.ಇ.ಸಿ. ಬೆಳಕು ಚೆಲ್ಲಿದೆ.
ಪಾಪ್ಯುಲರ್ ಫ್ರಂಟ್ ನ ಮತ್ತೊಂದು ನಿರ್ಣಯವು, ಅಸ್ತಿತ್ವದಲ್ಲಿರುವ ಸಾಂವಿಧಾನಿಕ ಗಣರಾಜ್ಯಕ್ಕೆ ವಿರುದ್ಧವಾದ ಹಿಂದು ರಾಷ್ಟ್ರದ ಕರಡು ಸಂವಿಧಾನದ ಸಿದ್ಧಪಡಿಸುತ್ತಿರುವುದರ ಬಗ್ಗೆ ಬಹಿರಂಗ ಘೋಷಣೆ ಮಾಡಿರುವ ಹಿಂದುತ್ವ ನಾಯಕರು ಮತ್ತು ಸಂತರ ಕುರಿತಾದ ಸರಕಾರದ ನಿಷ್ಕ್ರಿಯತೆ ಮತ್ತು ಮೌನವನ್ನು ಪ್ರಶ್ನಿಸಿದೆ.
ಇದು ಭಾರತೀಯ ಸಂವಿಧಾನ ಮತ್ತು ಅದರ ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೆ ಒಡ್ಡಿದ ಬಹಿರಂಗ ಬೆದರಿಕೆಯಾಗಿದ್ದು, ಇದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿತ್ತು. ದುರದೃಷ್ಟವಶಾತ್, ಇದರ ಹಿಂದಿರುವ ಜನರಿಗೆ ಯಾವುದೇ ಕಾನೂನು ಕ್ರಮ ಅಥವಾ ಮಾಧ್ಯಮ ವಿಚಾರಣೆ ಎದುರಿಸುವ ಪ್ರಮೇಯ ಒದಗಿ ಬಂದಿಲ್ಲ. ಮಾಧ್ಯಮದ ಒಂದು ವರ್ಗವು ಕೆಲವು ವಾರಗಳ ಹಿಂದೆ ಮುಸ್ಲಿಮ್ ಸಂಘಟನೆಗಳ ಮೇಲೆ ತಥಾಕಥಿತ ಇಸ್ಲಾಮಿಕ್ ರಾಷ್ಟ್ರ ನಿರ್ಮಾಣದ ಆರೋಪ ಹೊರಿಸಿ ಅವುಗಳ ಹೆಸರು ಕೆಡಿಸುವ ಮತ್ತು ಕೋಮು ವಿಭಜನೆ ಸೃಷ್ಟಿಸುವ ಪಿತೂರಿ ನಡೆಸುತ್ತಾ ಬಂತು. ತನಿಖಾ ಏಜೆನ್ಸಿಗಳು ಕೂಡ ಇದೇ ಸುಳ್ಳು ಮತ್ತು ನಿರಾಧಾರ ಆರೋಪಗಳಲ್ಲಿ ಹಲವು ರಾಜ್ಯಗಳಲ್ಲಿ ಮುಸ್ಲಿಮ್ ಯುವಕರನ್ನು ನಿರಂತರವಾಗಿ ಗುರಿಪಡಿಸುತ್ತಾ ಬಂದಿವೆ ಎಂದು ಎನ್.ಇ.ಸಿ. ನಿರ್ಣಯವು ಹೇಳಿದೆ.
ಮತ್ತೊಂದು ನಿರ್ಣಯದಲ್ಲಿ ಪಾಪ್ಯುಲರ್ ಫ್ರಂಟ್ ಎನ್.ಇ.ಸಿ, ‘ಗಣರಾಜ್ಯ ರಕ್ಷಿಸಿ’ ಹೆಸರಿನ ಸಂಘಟನೆಯ ಆರು ತಿಂಗಳ ಅಭಿಯಾನವನ್ನು ಯಶಸ್ವಿಗೊಳಿಸಿದ ಭಾರತದಾದ್ಯಂತ ನಾಗರಿಕರಿಗೆ ಕೃತಜ್ಞತೆಯನ್ನು ಸಲ್ಲಿಸಿದೆ.
ಸಂವಿಧಾನವನ್ನು ದುರ್ಬಲಗೊಳಿಸಲು ದೇಶದಲ್ಲಿ ಜಾರಿಯಲ್ಲಿದ್ದ ಪ್ರಯತ್ನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಹಮ್ಮಿಕೊಂಡ ಈ ಅಭಿಯಾನವು ಪಾಪ್ಯುಲರ್ ಫ್ರಂಟ್ ನ ಇತಿಹಾಸದಲ್ಲಿ ನಡೆದ ಸುದೀರ್ಘ ಅಭಿಯಾನವಾಗಿದೆ. ಜಾತ್ಯತೀತ ಪ್ರಜಾಸತ್ತಾತ್ಮಕ ಮೌಲ್ಯಗಳ ಶತ್ರುಗಳು ದೇಶವನ್ನು ಸರ್ವಾಧಿಕಾರ ಮತ್ತು ಮತಾಂಧತೆಯ ಹಾದಿಯಲ್ಲಿ ಕೊಂಡೊಯ್ಯಲು ಬಯಸುತ್ತಿದ್ದಾರೆ. ಸಾರ್ವಜನಿಕ ಸಭೆಗಳು, ಕಾರ್ನರ್ ಮೀಟಿಂಗ್ ಗಳು, ಮನೆ ಮನೆ ಅಭಿಯಾನ ಮತ್ತು ಇತರ ಕಾರ್ಯಕ್ರಮಗಳ ಮೂಲಕ ಸಂಘಟನೆಯ ಸ್ವಯಂ ಸೇವಕರು ಮತ್ತು ಕಾರ್ಯಕರ್ತರು ವಿವಿಧ ರಾಜ್ಯಗಳಲ್ಲಿನ ಜನ ಸಮೂಹವನ್ನು ತಲುಪಿದರು. ಲಕ್ಷಾಂತರ ಜನರನ್ನು ತಲುಪಲು ಮತ್ತು ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಅವರನ್ನು ದೃಢವಾಗಿ ನಿಲ್ಲುವಂತೆ ಮಾಡಲು ಈ ಅಭಿಯಾನವು ಯಶಸ್ವಿಯಾಗಿದೆ ಎಂದು ಎನ್.ಇ.ಸಿ ಹೇಳಿದೆ.