Home ಟಾಪ್ ಸುದ್ದಿಗಳು ಇಸ್ಲಾಂ ಧರ್ಮದ ವಿರುದ್ಧ ಸಂಘಪರಿವಾರ ಮುಖಂಡರಿಂದ ಪ್ರಚೋದನಕಾರಿ ಭಾಷಣ: ಪಾಪ್ಯುಲರ್ ಫ್ರಂಟ್ ಖಂಡನೆ

ಇಸ್ಲಾಂ ಧರ್ಮದ ವಿರುದ್ಧ ಸಂಘಪರಿವಾರ ಮುಖಂಡರಿಂದ ಪ್ರಚೋದನಕಾರಿ ಭಾಷಣ: ಪಾಪ್ಯುಲರ್ ಫ್ರಂಟ್ ಖಂಡನೆ

ಪುತ್ತೂರು: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಹತ್ಯೆಯನ್ನು ಖಂಡಿಸಿ ಪುತ್ತೂರಿನಲ್ಲಿ ಹಿಂದೂ ಜಾಗರಣ ವೇದಿಕೆ ನಡೆಸಿದ ಪ್ರತಿಭಟನೆಯಲ್ಲಿ ಇಸ್ಲಾಮ್ ಧರ್ಮದ ವಿರುದ್ಧ ಪ್ರಚೋದನಕಾರಿಯಾಗಿ ಭಾಷಣ ಮಾಡಿ ಪುತ್ತೂರಿನಲ್ಲಿ ಅಶಾಂತಿ ನಿರ್ಮಿಸಲು ಸಂಚು ರೂಪಿಸಲಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿ ಅಧ್ಯಕ್ಷ ಜಾಬಿರ್ ಅರಿಯಡ್ಕ ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಹತ್ಯೆ ಅತ್ಯಂತ ಖಂಡನೀಯ ಹಾಗೂ ಸಮಾಜ ಒಪ್ಪುವಂತದಲ್ಲ. ಈಗಾಗಲೇ ಎಲ್ಲಾ ಮುಸ್ಲಿಂ ಸಂಘಟನೆಗಳು  ಘಟನೆಯನ್ನು ಖಂಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ. ಆದರೆ ಸಂಘಪರಿವಾರ ಸಂಘಟನೆಗಳು ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಬೇಕೆಂಬ ಷಡ್ಯಂತ್ರ ರೂಪಿಸಿ ಉದಯಪುರ ಘಟನೆಯ ವಿರುದ್ಧ ಪ್ರತಿಭಟನೆಯ ನೆಪದಲ್ಲಿ ಇಸ್ಲಾಂ ಹಾಗೂ ಮುಸ್ಲಿಮರ ವಿರುದ್ಧವಾಗಿ ಪ್ರಚೋದನಕಾರಿ ಮಾತುಗಳನ್ನಾಡಿ ಅಶಾಂತಿ ಹಬ್ಬಿಸಲು ಯತ್ನಿಸುತ್ತಿದ್ದಾರೆ. ಪುತ್ತೂರಿನ ದರ್ಬೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘಪರಿವಾರದ ಮುಖಂಡರಾದ ಶ್ರೀಕೃಷ್ಣ ಉಪದ್ಯಾಯ ಹಾಗೂ ಕೊಲೆ ಆರೋಪಿ ನರಸಿಂಹ ಮಾಣಿ ಎಂಬಿಬ್ಬರು ಪೊಲೀಸರ ಸಮ್ಮುಖದಲ್ಲೇ ಇಸ್ಲಾಂ ಧರ್ಮವನ್ನು ಅತ್ಯಂತ ಕೀಳು ಮಟ್ಟದ ಮಾತುಗಳಿಂದ ನಿಂದಿಸಿದ್ದಾರೆ. ಅದಲ್ಲದೇ ಪ್ರವಾದಿ ನಿಂದನೆ ಮಾಡಿದ್ದ ನೂಪುರ್ ಶರ್ಮಾಳ ಹೇಳಿಕೆಯನ್ನು ಬಹಿರಂಗವಾಗಿ ಬೆಂಬಲಿಸಿ ಪುತ್ತೂರಿನ ಶಾಂತಿ ಕದಡಲು ಯತ್ನಿಸಿದ್ದು, ಇದು ಅತ್ಯಂತ ಖಂಡನೀಯ ಎಂದು ತಿಳಿಸಿದ್ದಾರೆ.

 ಪುತ್ತೂರಿನ ಹಿಂದು ಮುಖಂಡರಿಗೆ ನಿಜವಾದ ಹಿಂದು ಪ್ರೇಮ ಇದ್ದಿದ್ದರೆ ತಮ್ಮದೇ ಕಾರ್ಯಕರ್ತರು ಪೆರ್ಲಂಪಾಡಿಯ ಚರಣ್ ರಾಜ್ ಎಂಬಾತನನ್ನು ಹತ್ಯೆಗೈಯ್ಯುತ್ತಿರಲಿಲ್ಲ, ಅದೇ ರೀತಿ ಎರಡು ದಿನಗಳ ಹಿಂದೆ ಕೊಡಾಜೆಯಲ್ಲಿ ಶ್ರೀಧರ ಎಂಬಾತ ಶಕುಂತಲಾ ಎಂಬ ಹಿಂದೂ ಮಹಿಳೆಯನ್ನು ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡಿದಾಗ ಈ ಸಂಘಟನೆಗಳ ನಾಯಕರು  ಘಟನೆಯ ಬಗ್ಗೆ  ಖಂಡನೆ, ಹೇಳಿಕೆ, ಸರ್ಕಾರದ ಪರಿಹಾರ  ಧನ ನೀಡಲು ಆಗ್ರಹ ಯಾವುದೂ ಮಾಡದೆ ಇದೀಗ  ರಾಜಸ್ಥಾನದ ಘಟನೆಯ ಹೆಸರಿನಲ್ಲಿ ದೇಶಾದ್ಯಂತ ಮುಸ್ಲಿಮರ ವಿರುದ್ಧ ದ್ವೇಷ ಹರಡಲು ಷಡ್ಯಂತ್ರ ರೂಪಿಸಿದೆ ಎಂದು ಆರೋಪಿಸಿದರು.

ಹಾಗಾಗಿ ಪೋಲೀಸ್ ಇಲಾಖೆ ಪ್ರಚೋದನಾಕಾರಿ ಹೇಳಿಕೆ ನೀಡಿದವರ ವಿರುದ್ಧ ಹಾಗೂ ಪ್ರತಿಭಟನಾ ಸಭೆಯ ಆಯೋಜಕರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp
Exit mobile version