ಕಟಪಾಡಿ: ನಿರಂತರ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶವವನ್ನು ನೆರೆ ನೀರಿನಲ್ಲಿಯೇ ಹೊತ್ತುಕೊಂಡು ಹೋಗಿ ಶವ ಸಂಸ್ಕಾರ ನಡೆಸಿದ ಘಟನೆ ಕಾಪು ತಾಲೂಕು ಕೋಟೆ ಗ್ರಾ.ಪಂ. ವ್ಯಾಪ್ತಿಯ ಮಟ್ಟು ದೇವರಕುದ್ರುವಿನಲ್ಲಿ ನಡೆದಿದೆ.
ಸಂಪರ್ಕಕ್ಕೆ ರಸ್ತೆ ಇದ್ದರೂ, ತೋಟದಲ್ಲಿ ನೆರೆ ನೀರು ತುಂಬಿದ್ದರಿಂದ ಆ್ಯಂಬುಲೆನ್ಸ್ ಮನೆಯವರೆಗೆ ತಲುಪಲು ಸಾಧ್ಯವಾಗಿಲ್ಲ. ಹಾಗಾಗಿ ಮಟ್ಟು ದೇವರಕುದ್ರು ಬೊಮ್ಮನ್ ತೋಟದ ರಾಮಪ್ಪ ಕುಂದರ್ ಪತ್ನಿ ಬೇಬಿ ಪೂಜಾರಿ ಅವರ ಪಾರ್ಥಿವ ಶರೀರವನ್ನು ಸುಮಾರು ಅರ್ಧ ಕಿ.ಮೀ. ದೂರದವರೆಗೆ ಹೊತ್ತುಕೊಂಡು ಸಾಗಬೇಕಾಯಿತು.
ಆ ಬಳಿಕ ಆ್ಯಂಬುಲೆನ್ಸ್ ಮೂಲಕ ಸಾಗಿಸಿ ಕೋಟೆ ಗ್ರಾ.ಪಂ.ನ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಶವ ಸಂಸ್ಕಾರ ನಡೆಸಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.