ಬುದ್ದಿವಂತರ ಜಿಲ್ಲೆಯ ಅವೈಜಾನಿಕ, ಕಳಪೆ ರಸ್ತೆ ಕಾಮಗಾರಿಗಳು ಮತ್ತು ಇಚ್ಚಾಶಕ್ತಿ ಇಲ್ಲದ ಶಾಸಕರು, ಸಂಸದರು

Prasthutha|

- Advertisement -

ಅನ್ವರ್ ಸಾದತ್ ಬಜತ್ತೂರು

ಕರಾವಳಿ ಕರ್ನಾಟಕದ ರಾಜಧಾನಿ ಮಂಗಳೂರು ನಗರವನ್ನು ಕೇದ್ರೀಕರಿಸಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನು ವಿದ್ಯಾವಂತರ, ಬುದ್ದಿವಂತರ ಜಿಲ್ಲೆ ಎಂದು ಉಲ್ಲೇಖಿಸುತ್ತಾರೆ.ಇಲ್ಲಿರುವ ವಿದ್ಯಾ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು, ಪ್ರತಿಭಾವಂತ ವಿದ್ಯಾರ್ಥಿಗಳು ಅದೇರೀತಿ ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯನ್ನು ಗಳಿಸಿ ಅದರಿಂದ ಬದುಕು ಕಟ್ಟಿಕೊಂಡ ಜಿಲ್ಲೆಯ ಪ್ರಬುದ್ಧ ನಾಗರಿಕರಿಂದಾಗಿ ಬಹುಶಃ ಜಿಲ್ಲೆಗೆ ಈ ಪಟ್ಟ ಸಿಕ್ಕಿರಬಹುದು. ಆದರೆ ರಾಜಕೀಯ, ಸಾಮಾಜಿಕ, ಅಭಿವೃದ್ಧಿಯ ದೃಷ್ಟಿ ಕೋನದಿಂದ ನೋಡಿದಾಗ ಬುದ್ದಿವಂತರು ಎಂಬ ಪದಬಳಕೆ ನಮ್ಮನ್ನು ವ್ಯಂಗ್ಯ ಮಾಡಲು ಬಳಸುವಂತೆ ತೋರುತ್ತದೆ ಎಂದರೆ ತಪ್ಪಲ್ಲ. ಕಠಿಣ ಪರಿಶ್ರಮ, ಕ್ರಿಯಾಶೀಲತೆ ಮತ್ತು ಸ್ವಾವಲಂಬಿ ಬದುಕಿನ ಮೂಲಕ ಜಗತ್ತಿನ ಬಹುತೇಕ ಕ್ಷೇತ್ರಗಳಲ್ಲಿ ತನ್ನದೇ ಆದ ಐಡೆಂಟಿಫಿಕೇಷನ್ ಹೊಂದಿರುವ ಮಂಗಳೂರಿಯೆನ್ಸ್ ಈ ನೆಲದ ವಿಶೇಷ ಸಂಸ್ಕೃತಿ, ಆಚಾರ, ವಿಚಾರಗಳಿಗೆ ಹೆಸರುವಾಸಿಯಾಗಿದ್ದಾರೆ,

- Advertisement -

ಆದರೆ ನಮ್ಮ ಸರಕಾರಗಳು ರಾಜ್ಯದ ಎರಡನೇ ಪ್ರಮುಖ ನಗರ ಮಂಗಳೂರಿಗೆ ಕೊಟ್ಟಂತಹ ಕೊಡುಗೆ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಎನ್ನಬಹುದು, ಇಲ್ಲಿನ ಶೇಕಡಾ ಎಪ್ಪತ್ತು ಪರ್ಸೆಂಟ್ ಅಭಿವೃದ್ಧಿಯ ಹಿಂದೆ ಇಲ್ಲಿನ ನಾಗರಿಕರ ಮತ್ತು ಖಾಸಗಿ ಒಡೆತನದ ಪಾಲು ಹೊಂದಿದೆಯೇ ಹೊರತು ಸರಕಾರದ ಕೊಡುಗೆ ಅಲ್ಲವೇ ಅಲ್ಲ ರಾಜಧಾನಿ ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆ ಎಂದು ಹೊರಟ ಯಸ್ ಎಮ್ ಕೃಷ್ಣ ಹಾಗೂ ಆ ಬಳಿಕ ಬಂದ ಮುಖ್ಯಮಂತ್ರಿಗಳು ಅದಕ್ಕಾಗಿ ತೆಗೆದುಕೊಂಡ ಶ್ರಮ, ರೂಪುರೇಷೆ, ಕಾರ್ಯತಂತ್ರ, ವಿನಿಯೋಗಿಸಿದ ಅನುದಾನದ ಕೇವಲ ಹತ್ತು ಪರ್ಸೆಂಟ್ ದಕ್ಷಿಣ ಕನ್ನಡ ಜಿಲ್ಲೆಗೆ ವಿನಿಯೋಗಿಸಿದರೆ ಇಂದು ಮಂಗಳೂರು ನಗರ ಅಂತಾರಾಷ್ಟ್ರೀಯ ಭೂಪಟದಲ್ಲಿ ವಿಶೇಷ ಸ್ಥಾನ ಪಡೆಯುತಿತ್ತು, ಪ್ರತಿಭಾವಂತ ವಿದ್ಯಾರ್ಥಿಗಳಿರುವ ಜಿಲ್ಲೆಯಲ್ಲಿ ಕನಿಷ್ಠ ಒಂದು ಸರಕಾರಿ ಮೆಡಿಕಲ್ ಕಾಲೇಜು ಇಲ್ಲದೇ ಹೋದದ್ದು ಜಿಲ್ಲೆಯ ದುರಂತ ಎನ್ನುವುದಕ್ಕಿಂತ ಬೆನ್ನೆಲುಬಿಲ್ಲದ ಜನಪ್ರತಿನಿಧಿಗಳನ್ನು ಆರಿಸಿ ಕಳಿಸಿದ ಜಿಲ್ಲೆಯ ಮತದಾರರ ದುರಂತ ಎನ್ನಬಹುದು

ಒಂದು ನಾಡು ಅಭಿವೃದ್ಧಿ ಹೊಂದಬೇಕಾದರೆ ಮೊಟ್ಟಮೊದಲು ಸುಸಜ್ವಿತ ಮತ್ತು ಗುಣಮಟ್ಟದ ರಸ್ತೆಗಳು ಬೇಕು, ಸಾರ್ವಜನಿಕ ರಸ್ತೆಗಳ ಗುಣಮಟ್ಟದಲ್ಲಿ ಒಂದು ನಾಡಿನ ಅಭಿವೃದ್ಧಿಯನ್ನು ಅಳೆಯಲು ಸಾಧ್ಯವಿದೆ, ಆದರೆ ಶಿಕ್ಷಣ ಕಾಶಿ, ಬಂದರು ನಗರ ಎಂದೆಲ್ಲ ಕರೆಸಿಕೊಳ್ಳುವ ಮಂಗಳೂರು ಜಿಲ್ಲೆಯಲ್ಲಿ ನಾಲ್ಕೈದು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವಾರು ಪ್ರಮುಖ ರಾಜ್ಯ ಹೆದ್ದಾರಿಗಳು ಹೆದ್ದಾರಿಗಳು ಹಾದುಹೋಗುತ್ತಿದೆ, ಆದರೆ ಬಹುತೇಕ ಎಲ್ಲಾ ರಸ್ತೆಗಳು ಅತೀ ಕಳಪೆ ಗುಣಮಟ್ಟದ ಹೆದ್ದಾರಿಗಳಾಗಿದೆ, ಒಂದು ಮಳೆ ಬಂದು ಹೋದ ಬಳಿಕ ಇಲ್ಲಿನ ರಸ್ತೆ ಯಾವುದು ಗುಂಡಿ ಯಾವುದು ಎಂದು ತಿಳಿಯದಷ್ಟು ಮಟ್ಟಿಗೆ ರಸ್ತೆಗಳು ಹಾಳಾಗಿರುತ್ತದೆ, ವಾಹನ ಸವಾರರು ಎದ್ದು ಬಿದ್ದು ಸರಕಾರಕ್ಕೆ ಹಿಡಿಶಾಪ ಹಾಕಿಕೊಂಡು ರಸ್ತೆಯಲ್ಲಿ ಸಂಚರಿಸುವುದು ದಿನನಿತ್ಯ ಕಾಣುವ ದೃಶ್ಯಗಳಾಗಿದೆ. ಮಳೆಗಾಲದ ಬಳಿಕ ರಸ್ತೆಗಳನ್ನು ದುರಸ್ತಿ ಮಾಡಬೇಕಾದರೆ ನಾಗರಿಕರು ಪ್ರತಿಭಟನೆ ಮಾಡಬೇಕು, ಇಲ್ಲದಿದ್ದರೆ ಅಧಿಕಾರಿಗಳು ಕಣ್ಣೆತ್ತಿಯೂ ನೋಡುದಿಲ್ಲ, ಪ್ರತಿಭಟನೆ ಒತ್ತಡಗಳು ತೀವ್ರವಾದ ಬಳಿಕ ಕಾಟಾಚಾರಕ್ಕೆ ಪ್ಯಾಚ್ ವರ್ಕ್ ಮಾಡಿ ಅಧಿಕಾರಿಗಳು ವರದಿ ಒಪ್ಪಿಸುತ್ತಾರೆ. ಕರ್ನಾಟಕದ ಮಲೆನಾಡು, ಬಯಲುಸೀಮೆ, ಹಳೇ ಮೈಸೂರು, ಹೈದರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿ ಸಮರ್ಪಕವಾದ ರಸ್ತೆಗಳಿದ್ದರೆ ಮಂಗಳೂರಿನ ನಾಗರಿಕರ ಬದುಕಿಗೆ ನಿತ್ಯ ನರಕದರ್ಶನವನ್ನು ನಮ್ಮ ರಸ್ತೆಗಳು ಕೊಡುತ್ತಿದೆ, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಾದ 75,66,73,169 ಸಂಖ್ಯೆಯ ರಸ್ತೆಗಳ ಶೋಚನೀಯ ಅವಸ್ಥೆ ಇಲ್ಲಿನ ಸಂಸದರ, ಶಾಸಕರ ಇಚ್ಚಾಶಕ್ತಿಗೆ ಹಿಡಿದ ಕೈಗನ್ನಡಿ ಆಗಿದೆ. ಮಂಗಳೂರಿನ ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿಗೆ ಬರೋಬ್ಬರಿ ಹತ್ತು ವರ್ಷಗಳು ತೆಗೆದುಕೊಂಡಿದ್ದು ದೇಶಾದ್ಯಂತ ಚರ್ಚೆ ಮತ್ತು ನಗೆ ಪಾಟೀಲಿಗೆ ಒಳಗಾಗಿತ್ತು, ಮಂಗಳೂರಿನಲ್ಲಿ ಒಂದು ರಿಂಗ್ ರೋಡ್ ಇಲ್ಲ ಎಂದರೆ ಇಲ್ಲಿನ ವ್ಯವಸ್ಥೆ ಜಿಲ್ಲೆಯ ಅಭಿವೃದ್ಧಿಯನ್ನು ಎಷ್ಟು ನಿರ್ಲಕ್ಷ ಮಾಡುತ್ತಿದೆ ಎಂಬುದು ಗೊತ್ತಾಗುತ್ತದೆ. ಪ್ರಮುಖ ಹೆದ್ದಾರಿ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಸರಿಯಾದ ಮಾರ್ಗಸೂಚಿ ನಾಮಫಲಕಗಳೇ ಇಲ್ಲದ ಜಿಲ್ಲೆ ಎಂದರೆ ಅದು ದಕ್ಷಿಣ ಕನ್ನಡ ಜಿಲ್ಲೆ ಮಾತ್ರ.

ಜಿಲ್ಲೆಯನ್ನು ಮತ್ತು ರಾಜಧಾನಿಯನ್ನು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಾದ NH 75 ರಲ್ಲಿ ಸಂಚರಿಸಬೇಕಾದರೆ ವಾಹನಗಳಿಗೆ ಅಪಘಾತ ವಿಮೆಯ ಜತೆಗೆ ನಿರ್ವಹಣೆಗೂ ವಿಮೆ ಮಾಡಬೇಕಾದ ಪರಿಸ್ಥಿತಿ, ಕಳೆದ ಆರೇಳು ವರ್ಷಗಳಿಂದ ನಡೆಯುತ್ತಿರುವ ಅವೈಜ್ಞಾನಿಕ ಮತ್ತು ಮಂದಗತಿಯ ಕಾಮಗಾರಿಯಿಂದ ಜನರು ಸಂಕಷ್ಟಗಳ ಸರಮಾಲೆಯನ್ನೇ ಎದುರಿಸುತ್ತಿದ್ದಾರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ, ಗುತ್ತಿಗೆ ಕಂಪೆನಿ ಈ ವಿಷಯದಲ್ಲಿ ದೊಡ್ಡ ಕಾಳಜಿ ವಹಿಸಿದಂತೆ ಕಾಣುತ್ತಿಲ್ಲ, ಕಾಟಾಚಾರಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾಮಗಾರಿಯ ಪ್ರಗತಿ ಪರಿಶೀಲನೆ ಎಂಬ ಸಭೆ ನಡೆಸಿ ಮಾಧ್ಯಮಗಳಿಗೆ ಫೋಸ್ ಕೊಟ್ಟು ಕಾಫಿ ಕುಡಿದು ಸಭೆ ಮುಗಿಸುತ್ತಾರೆ ಆದರೆ ವರ್ಷ ಆರು ಕಳೆದರೂ ಕಾಮಗಾರಿ ಇನ್ನೂ ಶೇಕಡಾ ಐವತ್ತು ಕೂಡ ಮುಗಿದಿಲ್ಲ , ಇದಕ್ಕೆ ಪ್ರಮುಖ ಕಾರಣ ವಿದ್ಯಾವಂತರ ಜಿಲ್ಲೆಯ ಜಾಣ ಜಾಣೆಯರ ಜಾಣ ಮೌನವೇ ಆಗಿದೆ, ವಿದ್ಯಾವಂತ ಜನತೆಯ ಮೌನ ಬ್ಯುರೋಕ್ರಸಿ ಮತ್ತು ಪ್ರಭುತ್ವಕ್ಕೆ ವರದಾನವಾಗಿದೆ. ಅದೇರೀತಿ ನಮ್ಮ ಜಿಲ್ಲೆಯಲ್ಲಿ ನಿರಂತರ ಆರಿಸಿ ಬರುವ ಜನಪ್ರತಿನಿಧಿಗಳು ಅರ್ಥ ಮಾಡಿಕೊಂಡ ಪೊಲಿಟಿಕಲ್ ಫಿಲೋಸಫಿ ಏನೆಂದರೆ ಇಲ್ಲಿ ಹಸಿವು, ರಸ್ತೆ, ವಿದ್ಯುತ್, ನಿರುದ್ಯೋಗ, ಶಿಕ್ಷಣ, ಡೆವಲಪ್ಮೆಂಟ್ ಇದೆಲ್ಲ ತಾನು ಜನಪ್ರತಿನಿಧಿ ಆಗಲು ಬೇಕಾದ ಪೊಲಿಟಿಟಲ್ ಅಜೆಂಡಾ ಅಲ್ಲವೇ ಅಲ್ಲ, ಇಲ್ಲಿಗೆ ಬೇಕಾದದ್ದು ಹಿಂದೂ, ಮುಸ್ಲಿಂ, ಹಿಜಾಬ್, ಹಲಾಲ್.ಧರ್ಮ ದಂಗಲ್, ವ್ಯಾಪಾರ ನಿಷೇದ ಗೋಮಾಂಸ, ಹೇಟ್ ಸ್ಪೀಚ್, ರಾಮ ಮಂದಿರ, ಲವ್ ಜಿಹಾದ್,,,,,, ಇತ್ಯಾದಿಗಳು
ತಲಾ ಐದು ವರ್ಷಗಳಿಗೆ ಬರುವ ಚುನಾವಣೆಯಲ್ಲಿ ಈ ರೀತಿ ಹೊಸ ಹೊಸ ಹೆಸರಿನ ಅಜೆಂಡಾಗಳು ಚಾಲ್ತಿಗೆ ಬರುತ್ತದೆ ಅಮಾಯಕ ಮತದಾರಿಗೆ ಧರ್ಮದ ಅಫೀಮನ್ನು ವ್ಯವಸ್ಥಿತವಾಗಿ ಇಂಜೆಕ್ಟ್ ಮಾಡಿ ಪೋಲಿಂಗ್ ಬೂತಿಗೆ ಕಳಿಸ್ತಾರೆ . ದ್ವೇಷ ಮತ್ತು ಧರ್ಮದ ಕೃತಕ ನಶೆಯನ್ನು ಅರಿತೋ ಅರಿಯದೆಯೋ ಮಸ್ತಿಷ್ಕಕ್ಕೆ ತುಂಬಿಸಿಕೊಂಡು ದೇಶದ ಘನ ಸಂವಿದಾನ ನೀಡಿದ ಡೆಮೋಕ್ರೆಸಿ ಎಂಬ ತನ್ನ ಸಂವಿಧಾನಬದ್ಧ ಹಕ್ಕನ್ನು ಬ್ಯಾಲೆಟ್ ಬಟನ್ ಒತ್ತುವ ಮೂಲಕ ಚಲಾಯಿಸುತ್ತಾನೆ.
ಮತ್ತೆ ಐದು ವರ್ಷ ಅದೇ ನರಕ ಯಾತನೆ, ಅದೇ ರಸ್ತೆ, ಅದೇ ಬೀದಿ, ಅದೇ ಭಾಷಣ, ಅದೇ ವಾಗ್ದಾನ, ಎಲ್ಲವೂ ಅದೇರೀತಿ,

ನಮ್ಮ ಸಮಸ್ಯೆಗೆ ಪರಿಹಾರ ನಾವೇ ಕಾಣಬೇಕು
ಬುದ್ದಿವಂತರು ಎಂಬ ಗೌರವ ಡಾಕ್ಟರೇಟ್ ಪದವಿ ನಮಗೆ ಬೇಡ
ನಮ್ಮ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಮೊದಲು ನಾವು ಮೌನ ಮುರಿಯಬೇಕು
ಪರಸ್ಪರ ಅರಿಯಲು ಪ್ರಯತ್ನಿಸೋಣ
ಒಗ್ಗಟ್ಟಿನಿಂದ ಹೋರಾಟಕ್ಕೆ ದುಮುಕಬೇಕು
ಜನ ಶಕ್ತಿಯ ಮುಂದೆ ಪ್ರಭುತ್ವ ಮಂಡಿಯೂರಲೇ ಬೇಕು
ಇಚ್ಚಾ ಶಕ್ತಿ ಇಲ್ಲದ ಜಿಲ್ಲೆಯ ಶಾಸಕರು ಮತ್ತು ಸಂಸದರ ಮುಂದೆ ನಾವು ಜಿಲ್ಲೆಯ ರಸ್ತೆಗಳಿಗಾಗಿ, ಜ್ವಲಂತ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತಬೇಕು



Join Whatsapp