ಬೆಂಗಳೂರು; “ಇಂದಿನ ದರಿದ್ರ ರಾಜಕೀಯ ವ್ಯವಸ್ಥೆಯಲ್ಲಿ ರಾಜಕೀಯ ನಾಯಕರು ಎಂತಹ ಕೀಳು ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ, ಎಂತಹ ಕೀಳು ಮಟ್ಟದ ಆಲೋಚನೆ ಮಾಡಲು ಹಿಂಜರಿಯುವುದಿಲ್ಲ ಎಂದು ಹಿರಿಯ ಚಿಂತಕ, ಖ್ಯಾತ ವಕೀಲ ಸಿ.ಎಚ್. ಹನುಮಂತರಾಯಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ಹಿರಿಯ ಪತ್ರಕರ್ತ ವಿ. ವೀರಭದ್ರಪ್ಪ ಬಿಸ್ಲಳ್ಳಿ ಅವರ “ಬಾಂಬೆ ರಿಟರ್ನ್ ಡೇಸ್” ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜಕೀಯ ವ್ಯವಸ್ಥೆ, ರಾಜಕೀಯ ಸಂಸ್ಕೃತಿ ಅಧೋಗತಿಗಿಳಿದಿದೆ ಎಂದು ವಿಷಾದಿಸಿದರು.
ಯಾವುದೇ ಕೃತಿ ಓದಿದ ನಂತರ ನಾಲ್ಕು ಜನ ಕುಳಿತು ಚರ್ಚೆ ಮಾಡುವಂತಿರಬೇಕು. ಸಮಕಾಲೀನ ರಾಜಕಾರಣದ ಬಗ್ಗೆ ಅಂತಹ ಅತ್ಯುತ್ತಮ ಕೃತಿಯಾಗಿ “ಬಾಂಬೆ ರಿಟರ್ನ್ ಡೇಸ್” ಹೊರ ಹೊಮ್ಮಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, 21 ತಿಂಗಳ ರಾಜಕೀಯ ಘಟನಾವಳಿಗಳನ್ನು ಅತ್ಯಂತ ಸಮರ್ಥವಾಗಿ ಅನಾವರಣಗೊಳಿಸಿದ್ದಾರೆ ಎಂದರು.
ಕೃತಿಯಲ್ಲಿ ನವಿರಾದ ಭಾಷೆ, ಎಲ್ಲಿಯೂ ಅತಿರೇಖವಿಲ್ಲ, ಎಲ್ಲಾ ಘಟನಾವಳಿಗಳನ್ನು ಅತ್ಯಂತ ಆಳವಾಗಿ ವಿಶ್ಲೇಷಣೆ ಮಾಡಿದ್ದಾರೆ. ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ಅವರನ್ನು ಇಸ್ರೇಲ್ ಜನತೆ ಮೊಟ್ಟಮೊದಲ ರಾಷ್ಟ್ರಾಧ್ಯಕ್ಷರಾಗುವಂತೆ ಒಕ್ಕೂರಿಲಿನಿಂದ ಮನವಿ ಮಾಡುತ್ತಾರೆ. ಆಗ ಐನ್ ಸ್ಟೀನ್ ಹೇಳುತ್ತಾರೆ, “ಅಯ್ಯೋ ಹುಚ್ಚಪ್ಪಗಳೇ, ರಾಜಕಾರಣ ಎಂಬುದು ಮನುಷ್ಯರ ನಡುವಿನ ವ್ಯವಹಾರಗಳಿಗೆ ಸಂಬಂಧಪಟ್ಟಿದ್ದು. ನಾನು ಅಧ್ಯಕ್ಷನಾದರೆ ಮನುಷ್ಯರ ನಡುವೆ ವ್ಯವಹರಿಸಬೇಕಾಗುತ್ತದೆ. ಅದು ತಮ್ಮಿಂದ ಸಾಧ್ಯವಿಲ್ಲ. ಆದರೆ ಇಂದಿನ ರಾಜಕಾರಣ ಅರ್ಥ ಕಳೆದುಕೊಂಡಿದೆ ಎಂದರು.
ಲೇಖಕ ವಿ. ವೀರಭದ್ರಪ್ಪ ಬಿಸ್ಲಳ್ಳಿ ಮಾತನಾಡಿ, ಕೃತಿಯ ಮುಖಪುಟವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಾಗ ತಮ್ಮ ಹಿನ್ನೆಲೆ, ಊರು ಹೀಗೆ ಪ್ರತಿಯೊಂದು ವಿಷಯದ ಬಗ್ಗೆ ಕೆಲವರು ಸಮಗ್ರವಾಗಿ ತನಿಖೆ ಮಾಡಿದ್ದಾರೆ. ವಿಧಾನಸಭೆ ಚುನಾವಣೆ ಬರುತ್ತಿದೆ ಎಂಬ ಕಾರಣಕ್ಕಾಗಿ ಈ ಕೃತಿ ಬಿಡುಗಡೆ ಮಾಡುತ್ತಿಲ್ಲ. ರಾಜಕೀಯ ವ್ಯವಸ್ಥೆ ಎಷ್ಟೊಂದು ಕಲುಷಿತಗೊಂಡಿದೆ ಎಂಬುದನ್ನು ಮುಂದಿನ ಪೀಳಿಗೆಗೆ ತೋರಿಸಲು ಕೃತಿ ರಚಿಸಿದ್ದಾಗಿ ತಿಳಿಸಿದರು.
ಬರಹಗಾರ ಜಯಪ್ರಕಾಶ್ ನಾರಾಯಣ್ ಪುಸ್ತಕ ಕುರಿತು ಮಾತನಾಡಿದರು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ ಎಲ್.ಶ್ರೀನಿವಾಸ ಬಾಬು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.