Home ಜಾಲತಾಣದಿಂದ ಉತ್ತರ ಪ್ರದೇಶ : ಅತೀಕ್‌ ಅಹ್ಮದ್, ಸಹೋದರನ ಹತ್ಯೆ

ಉತ್ತರ ಪ್ರದೇಶ : ಅತೀಕ್‌ ಅಹ್ಮದ್, ಸಹೋದರನ ಹತ್ಯೆ

►ಪೊಲೀಸರು, ಮಾಧ್ಯಮಗಳ‌ ಸಮ್ಮುಖದಲ್ಲೇ ಶೂಟೌಟ್

ಪ್ರಯಾಗ್‌ರಾಜ್ : ಉತ್ತರ ಪ್ರದೇಶದ ಮಾಜಿ ಸಂಸದ, ಮಾಜಿ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಮತ್ತು‌ ಆತನ‌ ಸಹೋದರ ಅಶ್ರಫ್‌ ಅಹ್ಮದ್ ಪೊಲೀಸ್ ಕಸ್ಟಡಿಯಲ್ಲಿರುವಾಗ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದಾರೆ. ಪತ್ರಕರ್ತರ ಸೋಗಿನಲ್ಲಿ ಬಂದಿದ್ದ ಮೂವರು ಹಂತಕರು ಸಹೋದರರಿಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಶನಿವಾರ ರಾತ್ರಿ 10 ಗಂಟೆಯ ವೇಳೆ ಈ ಘಟನೆ ನಡೆದಿದೆ.

ಪ್ರಯಾಗ್‌ರಾಜ್‌ನಲ್ಲಿ ಇಬ್ಬರನ್ನು ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗುವಾಗ MLN ಮೆಡಿಕಲ್‌ ಕಾಲೇಜು ಆವರಣದಲ್ಲಿ ಈ ಹತ್ಯೆ ನಡೆದಿದೆ. ಮಾಧ್ಯಮಗಳ ಕ್ಯಾಮೆರಾದ ಎದುರಲ್ಲೇ ಹತ್ಯೆ ನಡೆದಿದ್ದು, ಬೆಚ್ಷಿಬೀಳಿಸುವ ಹತ್ಯೆಯ ಲೈವ್ ದೃಶ್ಯ ಕ್ಯಾಮೆರಾದಲ್ಲಿ‌ ಸೆರೆಯಾಗಿದೆ‌. ಈ ದೃಶ್ಯ ಕಂಡು ಇಡೀ ದೇಶವೇ ಬೆಚ್ಚಿಬಿದ್ದಿದೆ. ಉತ್ತರ ಪ್ರದೇಶ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಮಾಧ್ಯಮದವರು ಅತೀಕ್ ಅವರ ಬೈಟ್ ಪಡೆಯಲು ಪ್ರಯತ್ನಿಸುತ್ತಿರುವಾಗಲೇ ಅತೀಕ್ ಅಹ್ಮದ್ ತಲೆಗೆ ಕ್ಲೋಸ್ ರೇಂಜ್‌ನಲ್ಲಿ ಗನ್ ಇಟ್ಟು ಹತ್ಯೆ ಮಾಡಲಾಗಿದ್ದು, ಅಶ್ರಫ್ ಅವರನ್ನು ಅತೀ ಹತ್ತಿರದಿಂದ ಗುಂಡಿಕ್ಕೆ ಕೊಲೆ ಮಾಡಲಾಗಿದೆ. ಇಬ್ಬರು ನೆಲಕ್ಕುರುಳಿದ ಮೇಲೆ ಹಂತಕರು ಸತತವಾಗಿ ಇಬ್ಬರ ಮೇಲೆ‌ ಸುಮಾರು‌ 20 ಸುತ್ತು ಫೈರಿಂಗ್ ಮಾಡಿದ್ದಾರೆ.

https://twitter.com/ANI/status/1647293175780761601?t=48u78qnG_ocCIe436Se-yQ&s=19

ಸಿನಿಮೀಯ ರೀತಿಯಲ್ಲಿ ಭಯಾನಕವಾಗಿ ನಡೆದ ಈ ಘಟನೆಯಲ್ಲಿ ಕೆಲ ಪೊಲೀಸರು ಮತ್ತು ಓರ್ವ ಪತ್ರಕರ್ತ ಗಾಯಗೊಂಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಗುಂಪಿನಲ್ಲಿದ್ದ ಹಂತಕರು‌ ಏಕಾಏಕಿ ಜೈಶ್ರೀರಾಂ ಘೊಷಣೆ ಕೂಗುತ್ತಾ ಕ್ಲೋಸ್ ರೇಂಜ್‌ನಲ್ಲಿ ಸತತ ಫೈರಿಂಗ್ ಮಾಡಿದ್ದಾರೆ. ಈ ವೇಳೆ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸರು ಮತ್ತು‌ ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಬೆಚ್ವಿಬಿದ್ದಿದ್ದರು. ಹಂತಕರ ಅಟ್ಟಹಾಸ ಕಂಡು ಭದ್ರತೆಗಿದ್ದ ಪೊಲೀಸರೇ ಹಿಂದೆ ಸರಿದಿದ್ದರು. ಪೊಲೀಸರು ಪ್ರತಿದಾಳಿ ನಡೆಸದೇ ಹಿಂದೆ ಸರಿದಿರುವುದು ಹಲವು ಅನುಮಾನಗಳಿಗೂ ಎಡೆಮಾಡಿದೆ.

ಹತ್ಯೆ ಮಾಡಿದ ಬಳಿಕ ಮೂವರು ಹಂತಕರು ಶರಣಾಗಿದ್ದು ಪೊಲೀಸರು ಅವರನ್ನು ಬಂಧಿಸಿದ್ದಾರೆ. ಬಂಧಿತ ಮೂವರ ಹೆಸರು ಸನ್ನಿ, ಲವ್‌ಲೇಶ್ ತಿವಾರಿ ಮತ್ತು ಅರುಣ್ ಮೌರ್ಯ ಎಂದು ತಿಳಿದುಬಂದಿದೆ. ಹಂತಕರು ಬಂದಿದ್ದ ದ್ವಿಚಕ್ರ ವಾಹನ ಮತ್ತು ಹತ್ಯೆಗೆ ಬಳಸಿದ ಬಂದೂಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

ಅತೀಕ್ ಅಹ್ಮದ್ ಮತ್ತು ಅಶ್ರಫ್‌ ಅಹ್ಮದ್ ಭದ್ರತೆಗೆ ಪೊಲೀಸ್ ಅಧಿಕಾರಿಗಳು, ಗನ್‌ಮ್ಯಾನ್‌ಗಳು ಸೇರಿದಂತೆ 17 ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇಷ್ಡೊಂದು ಬಿಗಿ ಭದ್ರತೆ ಇರುವಾಗ ಮೂವರು ಯುವಕರು ಬಂದು ಸಲೀಸಾಗಿ ಹತ್ಯೆ ಮಾಡಿರುವುದು ಭದ್ರತಾ ಲೋಪವನ್ನು ಎತ್ತಿ ತೋರಿಸುತ್ತಿದೆ. ಹಂತಕರು 20 ಸುತ್ತು ಗುಂಡು ಹಾರಿಸುವಾಗ ಪ್ರತಿದಾಳಿ ನಡೆಸದ ಪೊಲೀಸರ ಕ್ರಮದ ಬಗ್ಗೆ ಸಂಶಯ ವ್ಯಕ್ತವಾಗಿದೆ. ಇದೊಂದು ಸರ್ಕಾರಿ ಪ್ರಯೋಜಿತ ಹತ್ಯೆ ಎಂಬ ಆರೋಪಗಳು ಕೇಳಿಬರುತ್ತಿದೆ.

ಅತೀಕ್ ಅಹ್ಮದ್ ಮತ್ತು‌ ಸಹೋದರ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ. ಮೂವರು ಸದಸ್ಯರ ಆಯೋಗವನ್ನು ರಚಿಸಲಾಗಿದೆ. ಭದ್ರತೆ ಲೋಪ ಹಿನ್ನೆಲೆಯಲ್ಲಿ ಭದ್ರತೆಗೆ ನಿಯೋಜಿಸಿದ್ದ 17 ಮಂದಿ‌ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಘಟನೆ ನಡೆದ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯಾಗ್‌ರಾಜ್‌ನಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ‌ ಪೂರ್ತಿ ಉತ್ತರ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಈ ಘಟನೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕರು, ಯೋಗಿಯ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಆರೋಪಿಸಿದ್ದಾರೆ. ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ವಿಪಕ್ಷ ನಾಯಕ‌ ಅಖಿಲೇಶ್ ಯಾದವ್, ಉತ್ತರ ಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಪರಾಕಾಷ್ಠೆಗೆ ತಲುಪಿದೆ ಎಂದು ಕಿಡಿಕಾರಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಈ‌ ಘಟನೆ ಉತ್ತಮ‌ ಉದಾಹರಣೆ ಎಂದು ಸಂಸದ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ.

ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅತೀಕ್ ಅಹ್ಮದ್ ಗುಜರಾತಿನ ಸಬರಮತಿ ಜೈಲ್‌ನಲ್ಲಿದ್ದರು. ಪ್ರಯಾಗ್‌ರಾಜ್‌ಗೆ ಕರೆದುಕೊಂಡು ಹೋದರೆ ನನ್ನ ಹತ್ಯೆ ಮಾಡುವ ಆತಂಕ ಇದೆ ಎಂದು ಕೋರ್ಟ್ ಮೊರೆ ಕೂಡ ಹೋಗಿದ್ದರು. ಏಪ್ರಿಲ್ 13ರಂದು ಝಾನ್ಸಿಯಲ್ಲಿ ಅತೀಕ್ ಪುತ್ರ ಅಸಾದ್ ಎಂಬಾತನ ಎನ್‌ಕೌಂಟರ್ ನಡೆದಿತ್ತು. ನಿನ್ನೆಯಷ್ಟೇ ಆತನ ಅಂತ್ಯಕ್ರಿಯೆ ನಡೆದಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದ ಅತೀಕ್‌ ಮಗನ ಅಂತ್ಯಕ್ರಿಯೆಯಲ್ಲಿ‌ ಭಾಗಿಯಾಗಿರಲಿಲ್ಲ. ಮಗ ಮಣ್ಣಾದ ಕೆಲ ಹೊತ್ತಿನಲ್ಲೇ ಅಪ್ಪನ ಹತ್ಯೆ ಕೂಡ ನಡೆದಿದೆ.

Join Whatsapp
Exit mobile version