Home ಟಾಪ್ ಸುದ್ದಿಗಳು ಎನ್. ಮಹೇಶ್ ಬಿಜೆಪಿ ಗೆ ಸೇರುವ ಮೂಲಕ ರಾಜಕೀಯ ಆತ್ಮಹತ್ಯೆ ಮಾಡಿದ್ದಾರೆ: ಬಿಎಸ್ಪಿ

ಎನ್. ಮಹೇಶ್ ಬಿಜೆಪಿ ಗೆ ಸೇರುವ ಮೂಲಕ ರಾಜಕೀಯ ಆತ್ಮಹತ್ಯೆ ಮಾಡಿದ್ದಾರೆ: ಬಿಎಸ್ಪಿ

ಬೆಂಗಳೂರು: ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಬಿಜೆಪಿ ಸೇರ್ಪಡೆ ಆಗುವ ಮೂಲಕ ರಾಜಕೀಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ, ಸಂಸದ ಡಾ.ಅಶೋಕ್ ಸಿದ್ದಾರ್ಥ ಟೀಕಿಸಿದರು.

ನಗರದಲ್ಲಿಂದು ನಗರದಲ್ಲಿಂದು ಕುಮಾರಕೃಪಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬರೋಬ್ಬರಿ ಎಂಟು ಬಾರಿ ಅವರಿಗೆ ಪಕ್ಷದಿಂದ ಬಿಫಾರಂ ನೀಡಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಾಯಿತು. ಆದರೂ, ಅವರು ಬಿಎಸ್ಪಿಯಿಂದ ಮೋಸವಾಯಿತು ಎಂದು ಹೇಳುವುದು ಹಾಸ್ಯಾಸ್ಪದ ಎಂದರು.

ಬಿಎಸ್‌ಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವವರು ಕಸವು ಕಸದ ಬುಟ್ಟಿ ಸೇರಿದಂತೆ ಎಂದು ಪಕ್ಷದ ಸಂಸ್ಥಾಪಕ ದಾದಾಸಾಹೇಬ್ ಕಾನ್ಸಿರಾಂ ಜಿ ಹೇಳಿದ್ದಾರೆ .ಈ ಮಾತು ಮಹೇಶ್ ವಿಷಯದಲ್ಲೂ ನಿಜವಾಗಲಿದೆ ಎಂದು ತಿಳಿಸಿದರು.

ಬಿಎಸ್‌ಪಿ ರಾಜಕೀಯ ಪಕ್ಷವಷ್ಟೇ ಅಲ್ಲ. ಅದೊಂದು ಸಾಮಾಜಿಕ ಪರಿವರ್ತನಾ ಆಂದೋಲನ. ಯಥಾಸ್ಥಿತಿ ವಾದಕ್ಕೆ ಏಕೈಕ ಪರ್ಯಾಯ ಎಂದ ಅವರು, ಕಾಂಗ್ರೆಸ್‌ ಗರ್ಭದಲ್ಲೇ ಆರ್‌ಎಸ್‌ಎಸ್‌ ಹುಟ್ಟಿದೆ. ಬಿಜೆಪಿಯ ಮೂಲ ಆರ್‌ಎಸ್‌ಎಸ್‌ ಆಗಿದೆ. ಕಮ್ಯೂನಿಸ್ಟ್‌, ಜನತಾ ಪರಿವಾರ ಸೇರಿದಂತೆ ದೇಶದ ಎಲ್ಲರಾಜಕೀಯ ಪಕ್ಷಗಳು ಕಾಂಗ್ರೆಸ್‌ ಮೂಲದಿಂದಲೇ ಜನ್ಮ ತಾಳಿವೆ. ಹೀಗಾಗಿ ಎಲ್ಲರ ಮೂಲ ಆಲೋಚನಾಕ್ರಮ ಅಧಿಕಾರ ಹಿಡಿಯುವುದಷ್ಟೇ ಎಂದು ನುಡಿದರು.

ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, ಎನ್.ಮಹೇಶ್ ಬಿಜೆಪಿಯ ಆಮಿಷಗಳಿಗೆ ಬಲಿಯಾಗಿದ್ದಾರೆ. ತಮ್ಮ ಸ್ವಾರ್ಥ ಆಸೆಗಳಿಗೆ ಪಕ್ಷದ ಸಿದ್ದಾಂತಕ್ಕೆ ಧಕ್ಕೆ ತಂದಿದ್ದಾರೆ. ಅಲ್ಲದೆ, ಸಿದ್ಧಾಂತಕ್ಕೆ ವಿರುದ್ಧವಾಗಿ ಬಿಜೆಪಿ ಸೇರಿರುವ ಮಹೇಶ್ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ರಾಜ್ಯ ಸಂಯೋಜಕ ಮಾತಸಂದ್ರ ಮುನಿಯಪ್ಪ ಮಾತನಾಡಿ, ಬಿಜೆಪಿ ತತ್ವ ಸಿದ್ಧಾಂತ ಅಂಬೇಡ್ಕರ್ ಅವರ ಸಮಾನತಾವಾದಕ್ಕೆ ವಿರುದ್ಧವಾಗಿದೆ. ಅಲ್ಲದೆ, ಎನ್‌.ಮಹೇಶ್ ಇಲ್ಲದಿದ್ದರೆ ಬಿಎಸ್ಪಿ ಇರುವುದಿಲ್ಲ ಎನ್ನುವ ಭ್ರಮೆ ಸುಳ್ಳು. ಮಹೇಶ್ ಅವರ ಇಡೀ ರಾಜಕೀಯ ಜೀವನ ಬಿಎಸ್‌ಪಿಯಿಂದ ರೂಪುಗೊಂಡಿದ್ದು, ಅವರ ರಾಜಕೀಯ ಜೀವನದ ಮೂಲೆ ಮೂಲೆಯಲ್ಲೂ ವಿದ್ಯಾರ್ಥಿಗಳು, ನೌಕರರು, ತನು,ಮನ, ದನ, ನೀಡಿ ಬೆಂಬಲಿಸಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಯೋಜಕರಾದ ಎಂ.ಗೋಪಿನಾಥ್, ದಿನೇಶ್ ಗೌತಮ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ ಸೇರಿದಂತೆ ಪ್ರಮುಖರಿದ್ದರು.

Join Whatsapp
Exit mobile version