Home ಟಾಪ್ ಸುದ್ದಿಗಳು ಬೊಮ್ಮಾಯಿ ಸಂಪುಟದಲ್ಲಿ ದಲಿತರಿಗೆ ಅನ್ಯಾಯ, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ : ಡಾ.ಅಶೋಕ್ ಸಿದ್ದಾರ್ಥ

ಬೊಮ್ಮಾಯಿ ಸಂಪುಟದಲ್ಲಿ ದಲಿತರಿಗೆ ಅನ್ಯಾಯ, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ : ಡಾ.ಅಶೋಕ್ ಸಿದ್ದಾರ್ಥ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ದಲಿತ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಬಿಎಸ್ಪಿ ರಾಜ್ಯ ಸಂಸದ ಡಾ.ಅಶೋಕ್ ಸಿದ್ದಾರ್ಥ ಆರೋಪಿಸಿದ್ದಾರೆ. ನಗರದಲ್ಲಿಂದು ಕುಮಾರಕೃಪಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರ ಪತನದ ಬಳಿಕ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನೂತನ ಸರ್ಕಾರ ಆಸ್ತಿತ್ವಕ್ಕೆ ಬಂದಿದೆ. ಆದರೆ, ಎಸ್ ಸಿ-ಎಸ್ಟಿ ಸಮುದಾಯದ ಜನಪ್ರತಿನಿಧಿಗಳಿಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಹೇಳಿದರು.


ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಶೇಕಡ 30ಕ್ಕಿಂತ ಕಡಿಮೆ ಇರುವ ಸಮುದಾಯಗಳಿಗೆ ಸಚಿವ ಸಂಪುಟದಲ್ಲಿ ಸಿಂಹಪಾಲು ಸ್ಥಾನ ಮಾನ ದೊರೆತಿದೆ. ಆದರೆ ಜನಸಂಖ್ಯೆಯಲ್ಲಿ ಶೇ.70ರಷ್ಟು ಇರುವ ಎಸ್ ಸಿ, ಎಸ್ಟಿ, ಓಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ಕೇವಲ ಶೇ.30ರಷ್ಟು ಗಿಂತ ಕಡಿಮೆ ಅವಕಾಶಗಳನ್ನು ನೀಡಲಾಗಿದೆ. ಜತೆಗೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಟೀಕಿಸಿದರು.


ಓಬಿಸಿಗಳಿಗೆ ಕನಿಷ್ಠ 9 ಸ್ಥಾನಗಳನ್ನು ನೀಡಬೇಕಿತ್ತು. ಎಸ್ಸಿ, ಎಸ್ ಟಿಗಳಿಗೆ ಸ್ಥಾನಗಳನ್ನು ನೀಡಬೇಕಾಗಿತ್ತು. ಆದರೆ ಈಗಿನ ಸಚಿವ ಸಂಪುಟದಲ್ಲಿ ಅವರ ಪಾಲು ಕ್ರಮವಾಗಿ 5 ಮತ್ತು 4 ಇದೆ. ಅಲ್ಲದೆ ಮಂತ್ರಿಮಂಡಲದಲ್ಲಿ ಹೊಲೆಯ ಮತ್ತು ಭೋವಿ ಮತ್ತು ಅತಿಹಿಂದುಳಿದ ವರ್ಗಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.


ಬಹುಜನ ಸಮಾಜಕ್ಕೆ ಸಾರಿಗೆ, ಪಶುಸಂಗೋಪನೆ, ಮೀನುಗಾರಿಕೆ, ಕ್ರೀಡೆ, ನಗರಾಭಿವೃದ್ಧಿ ಬಿಬಿಎಂಪಿ ಮತ್ತು ಬಿಡಿಎ ಇಲಾಖೆಗಳನ್ನು ಹೊರತುಪಡಿಸಲಾಗಿದ್ದು, ದಿವಾಳಿಯಲ್ಲಿರುವ ಇಲಾಖೆಗಳನ್ನು ಎಸ್ ಸಿ,ಎಸ್ ಟಿ, ಓಬಿಸಿಗಳಿಗೆ ನೀಡಿದ್ದಾರೆ. ಅದೇ ರೀತಿ, ಸಮಾಜ ಕಲ್ಯಾಣ ಇಲಾಖೆಯನ್ನು ಬೇರ್ಪಡಿಸಿದ್ದಾರೆ ಎಂದರು. ವಂಚನೆಗೆ ಒಳಗಾದ ಹಿಂದುಳಿದ ವರ್ಗ, ದಲಿತರು ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಅಶೋಕ್ ನುಡಿದರು.


ಪತ್ರಿಕಾಗೋಷ್ಠಿಯಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ರಾಜ್ಯ ಸಂಯೋಜಕರಾದ ಮಾರಸಂದ್ರ ಮುನಿಯಪ್ಪ, ಎಂ.ಗೋಪಿನಾಥ್, ದಿನೇಶ್ ಗೌತಮ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ ಸೇರಿದಂತೆ ಪ್ರಮುಖರಿದ್ದರು.

Join Whatsapp
Exit mobile version