Home ಟಾಪ್ ಸುದ್ದಿಗಳು ಮಹಜರಿಗೆ ಕರೆದೊಯ್ದಾಗ ಪೊಲೀಸರ ಮೇಲೆ ಹಲ್ಲೆ: ಆರೋಪಿಗೆ ಗುಂಡೇಟು

ಮಹಜರಿಗೆ ಕರೆದೊಯ್ದಾಗ ಪೊಲೀಸರ ಮೇಲೆ ಹಲ್ಲೆ: ಆರೋಪಿಗೆ ಗುಂಡೇಟು

ಬೆಂಗಳೂರು: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರ್’ಗೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಲಾಂಗ್ ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಗೆ ಮಾದನಾಯಕನಹಳ್ಳಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.

ಪೊಲೀಸರ ಗುಂಡೇಟು ತಗುಲಿ ಕಾಲಿಗೆ ಗಾಯಗೊಂಡಿರುವ ರೌಡಿ ರಾಜರಾಜನ್ ಅಲಿಯಾಸ್ ಸೇಠು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ರಾಜರಾಜನ್ ಲಾಂಗ್’ನಿಂದ ನಡೆಸಿದ ಹಲ್ಲೆಯಿಂದ ಪೇದೆ ಹಾಜಾ ನಾಮ್ದಾರ್ ಎಡಗೈಗೆ ಗಾಯವಾಗಿದ್ದು  ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಸನಪುರ ಹೋಬಳಿಯ ಮಾಚೋಹಳ್ಳಿಯ ಗೋಡೌನ್ ಒಂದರ ಬಳಿ ನ.15 ರಂದು ನಡೆದ ರೌಡಿ ಶೀಟರ್ ನಟರಾಜ ಅಲಿಯಾಸ್ ಮುಳ್ಳು ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜನ್ ಅಲಿಯಾಸ್ ಮುಳ್ಳು ಹಾಗೂ ಕುಮಾರ್ ಸೇರಿ ಇಬ್ಬರನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿತ್ತು. ಕೊಲೆಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗಿದೆ.

ಬಂಧಿತ ಪ್ರಮುಖ ಆರೋಪಿ ರಾಜರಾಜನ್’ನನ್ನು ಮಾದನಾಯಕನಹಳ್ಳಿ ಪೊಲೀಸರ ತಂಡ ಇಂದು ಮುಂಜಾನೆ ಸ್ಥಳ ಮಹಜರ್’ಗೆ ಕರೆದೊಯ್ದ ಸಂದರ್ಭದಲ್ಲಿ ಕೊಲೆಗೆ ಬಳಸಿದ ಲಾಂಗ್’ನ್ನು ಹುಡುಕಿ ತೆಗೆದ ಅಪರಾಧಿ ರಾಜರಾಜನ್ ಏಕಾಏಕಿ ಪೊಲೀಸರ ಮೇಲೆ ಲಾಂಗ್ ಬೀಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪೇದೆ ಹಾಜಾ ನಾಮ್ದಾರ್ ಎಡಗೈಗೆ ತೀವ್ರತರವಾದ ಗಾಯವಾಗಿದೆ.

ಈ ವೇಳೆ ಪೊಲೀಸ್ ಇನ್ಸ್’ಪೆಕ್ಟರ್ ಬಿ. ಎಸ್. ಮಂಜುನಾಥ್ ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಯನ್ನು ಎದುರಿಸಲು ಪ್ರಯತ್ನಿಸಿದರಾದರೂ ರಾಜರಾಜನ್ ಮತ್ತೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಮತ್ತೊಂದು ಗುಂಡು ಹಾರಿಸಿದ್ದು ಅದು ಅಪರಾಧಿ ಎಡಗಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ಬಳಿಕ ಆತನನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಗ್ರಾಮಾಂತರ ಎಸ್ ಪಿ ಬಾಲದಂಡಿ ತಿಳಿಸಿದ್ದಾರೆ.

Join Whatsapp
Exit mobile version