ನಮಾಜ್ ನಿಂದ ರಸ್ತೆ ತಡೆ ಎಂಬ ಪಿಟ್ಟಿ ಕೇಸ್ ಅನ್ನು ‘ಕ್ರಿಮಿನಲ್ ಕೂಟ’ ಎಂದ ಪೊಲೀಸರ ಮೇಲೆ ಕ್ರಮ ಯಾವಾಗ ?

Prasthutha|

►ನವೀನ್ ಸೂರಿಂಜೆ

- Advertisement -


ರಸ್ತೆಯಲ್ಲಿ ನಮಾಜ್ ಮಾಡಿರುವ ಪ್ರಕರಣದ ದೂರುದಾರರಾಗಿ ಎಫ್ಐಆರ್ ದಾಖಲಿಸಿರುವ ಪೊಲೀಸರ ವಿರುದ್ದ ಇಲಾಖಾ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು. ಎಫ್ಐಆರ್ ದಾಖಲಿಸಿರುವ ಪೊಲೀಸರ ಕ್ರಮ ಕಾನೂನು ಬದ್ದವಾಗಿಲ್ಲವಾಗಿದ್ದು ಕೋಮುದ್ವೇಷ ಸಾಧನೆಯಂತೆ ಮೇಲ್ನೊಟಕ್ಕೆ ಕಂಡು ಬರುತ್ತದೆ.


ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಿನಾಂಕ 28.05.2024 ರಂದು ಎಫ್ಐಆರ್ ದಾಖಲಾಗುತ್ತದೆ.‌ ದೂರುದಾರರು ಖುದ್ದು ಪೊಲೀಸ್ ಅಧಿಕಾರಿ ಸೋಮಶೇಖರ್. ಐಪಿಸಿ ಸೆಕ್ಷನ್ 341, 283, 143, 149 ಅಡಿಯಲ್ಲಿ ಕ್ರೈ ನಂ 85/2024 ದಾಖಲಾಗುತ್ತದೆ. ಎಫ್ಐಆರ್ ನಲ್ಲಿ ಆರೋಪಿಗಳ ಕಾಲಂನಲ್ಲಿ Unkown 8 to 10 Person (A1) ಎಂದು ದಾಖಲಿಸಲಾಗುತ್ತದೆ. ಅಂದರೆ ಅಪರಿಚಿತ 8 ರಿಂದ 10 ವ್ಯಕ್ತಿಗಳು ಆರೋಪಿಗಳು ಎಂದು ದಾಖಲಿಸಲಾಗುತ್ತದೆ.

- Advertisement -


ಆರೋಪಿಗಳು ಯಾರು ಎಂದು ತಿಳಿಯದೇ ಇರುವಾಗ ಮಂಗಳೂರು ಪೂರ್ವ ಪೊಲೀಸರು ರೆಹಮಾನಿಯಾ ಜುಮ್ಮಾ ಮಸೀದಿಯ ಅಡಳಿತ ಮಂಡಳಿಯಿಂದ ಮುಚ್ಚಳಿಕೆ ಬರೆಸಿಕೊಂಡಿದ್ದು ಯಾಕೆ ? ಯಾವ ಕಾನೂನಿನ ಅಡಿಯಲ್ಲಿ ರೆಹಮಾನಿಯಾ ಜುಮ್ಮಾ ಮಸೀದಿಯ ಆಡಳಿತ ಮಂಡಳಿಯನ್ನು ಠಾಣೆಗೆ ಕರೆಸಲಾಯಿತು ? ಯಾವ ಕಾನೂನಿನ ಅಡಿಯಲ್ಲಿ ಅವರಿಂದ ಮುಚ್ಚಳಿಕೆ ಪಡೆಯಲಾಯಿತು. ರಸ್ತೆಯಲ್ಲಿ ಪ್ರಾರ್ಥನೆಯನ್ನು ಮಸೀದಿಯ ಆಡಳಿತ ಮಂಡಳಿ ಆಯೋಜಿಸಿಲ್ಲ ಎಂದಾದ ಮೇಲೆ ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳಲು ಯಾವ ಕಾನೂನು ಅನುಮತಿಸುತ್ತದೆ ? ಇದು ಯಾರೋ ಅಪರಿಚಿತರು ಮಾಡಿದ ಕೃತ್ಯಕ್ಕೆ ಸಮುದಾಯ ಅಥವಾ ಒಂದು ಧರ್ಮವನ್ನು ಹೊಣೆ ಮಾಡುವ ಪೊಲೀಸರ ಕೋಮು ಕೃತ್ಯವಲ್ಲವೇ ? ಈ ಬಗ್ಗೆ ಪೊಲೀಸ್ ಆಯುಕ್ತರು ತನಿಖೆ ನಡೆಸಬೇಕು.


ಎಫ್ಐಅರ್ ನಲ್ಲಿರುವ ದೂರಿನ ಸಾರಾಂಶದ ಪ್ರಕಾರ ” ರೆಹಮಾನಿಯಾ ಎಂಬ ಜುಮ್ಮಾ ಮಸೀದಿಯ ಎದುರು ಸುಮಾರು 8 ರಿಂದ 10 ಅಪರಿಚಿತ ವ್ಯಕ್ತಿಗಳು ಸಾರ್ವಜನಿಕ ರಸ್ತೆಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸದ್ರಿ ವಿಡಿಯೋವನ್ನು ಪಿರ್ಯಾದಿದಾರರು ಪರಿಶೀಲಿಸಿ ಸದ್ರಿ ಸಾಮೂಹಿಕ ಪ್ರಾರ್ಥನೆಯು ಕಳೆದ ಶುಕ್ರವಾರ ಅಂದರೆ ದಿನಾಂಕ 24.05.2024 ರಂದು ಮದ್ಯಾಹ್ನ ಸಮಯದಲ್ಲಿ ನಡೆದಿರುವುದಾಗಿ ತಿಳಿದು ಬಂದಿದ್ದು, ಸದ್ರಿ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರಿಗೆ ಮತ್ತು ಸಂಚರಿಸುವ ವಾಹನಗಳಿಗೆ ಉದ್ದೇಶಪೂರ್ವಕ ಅಡತಡೆಯನ್ನು ಉಂಟು ಮಾಡುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ” ಎಂದಿದೆ.


ಈ ದೂರಿನ ಮೇಲೆ ಐಪಿಸಿ 341 ಹೇಗೆ ಅನ್ವಯ ಆಗುತ್ತದೆ ? “ವ್ಯಕ್ತಿಯನ್ನು ಬಲವಂತವಾಗಿ ತಡೆಯುವುದು” (Wrongful restraint) ಐಪಿಸಿ 341 ಪ್ರಕಾರ ಅಪರಾದ ಆಗುತ್ತದೆ. ಇಲ್ಲಿ ಯಾರನ್ನು ಬಲವಂತವಾಗಿ ತಡೆಯಲಾಗಿದೆ ? ಯಾರಾದರೂ ನಾನು ಆ ರಸ್ತೆಯಲ್ಲಿ ಹೋಗಲೇ ಬೇಕಿದೆ ಎಂದು ಹಠ ಕಟ್ಟಿ ನಿಂತಿದ್ದರೆ ? ನಾನು ಇದೇ ರಸ್ತೆಯಲ್ಲಿ ಹೋಗಲೇಬೇಕು ಎಂದಾಗ ಗುಂಪು ಬಲ ಪ್ರಯೋಗ ಮಾಡಿ ಆ ವ್ಯಕ್ತಿಯನ್ನು ತಡೆದು ನಿಲ್ಲಿಸಿತೆ ? ದೂರುದಾರ ವ್ಯಕ್ತಿಯೇ ಇಲ್ಲದೇ ಬಲಪ್ರಯೋಗಿಸಿ ತಡೆಯುವುದಾದರೂ ಯಾರನ್ನು ? ಸಂವಿದಾನದ ಆರ್ಟಿಕಲ್ 19 ಮತ್ತು 21 ಗೆ ಧಕ್ಕೆಯಾದರೆ ಮಾತ್ರ ಈ ಸೆಕ್ಷನ್ ಅನ್ನು ಹಾಕಬೇಕು‌. ಅಂತಹ ಪ್ರಸಂಗವೇ ಉದ್ಬವಿಸದೆ ಈ ಸೆಕ್ಷನ್ ಅನ್ನು ಪೊಲೀಸರು ಹಾಕಿದ್ದು ಯಾಕೆ ?
ಐಪಿಸಿ 283 ಹಾಕಿರುವುದು ಸರಿಯಾಗಿದೆ. ಹೆಚ್ಚೆಂದರೆ ಈ ದೂರಿಗೆ “ಸಾರ್ವಜನಿಕ ಮಾರ್ಗಕ್ಕೆ ಅಡಚಣೆ” ಎಂಬ ಆರೋಪದ ಮೇಲೆ 283 IPC ಹಾಕಬಹುದು.


ಪೊಲೀಸರು ಪ್ರಾರ್ಥನೆ ನಿರತರ ಮೇಲೆ ಹಾಕಿರುವ ಐಪಿಸಿ 143 ಯು ಕಾನೂನು ಬಾಹಿರ ಸಭೆ/ಅಕ್ರಮ ಕೂಟ / unlawful assembly ಸೇರುವಿಕೆಗೆ ಇರುವ ಶಿಕ್ಷೆಯನ್ನು ಹೇಳುತ್ತದೆ. ಪ್ರಾರ್ಥನೆ ಮಾಡುವುದು ಅಕ್ರಮ ಕೂಟ/ unlawful assembly ಹೇಗಾಗುತ್ತದೆ ?
ಕಾನೂನುಬಾಹಿರ ಸಭೆ/ಅಕ್ರಮ ಕೂಟ / unlawful assembly ಎಂಬುದಕ್ಕೆ ಕಾನೂನಿನ ವಿವರಣೆ ಇದೆ. ಅದರ ಪ್ರಕಾರ : ಕೇಂದ್ರ, ರಾಜ್ಯ, ಸರ್ಕಾರ, ನ್ಯಾಯಾಂಗ, ಸಂಸತ್ತು ಅಥವಾ ಯಾವುದಾದರೂ ಸರ್ಕಾರಿ ನೌಕರನ ವಿರುದ್ದ ಕ್ರಿಮಿನಲ್ ಬಲವನ್ನು ಪ್ರಯೋಗಿಸುವುದು/ ಪ್ರದರ್ಶಿಸುವುದು ಅಥವಾ ಯಾವುದಾದರೂ ಕಾನೂನು ಪ್ರಕ್ರಿಯೆಯನ್ನೋ, ನ್ಯಾಯಾಂಗದ ತೀರ್ಪನ್ನು ವಿರೋಧಿಸಲು ಸಭೆ ಸೇರುವುದು ಅಥವಾ ಕಿಡಿಗೇಡಿತನ, ಕ್ರಿಮಿನಲ್ ಅತಿಕ್ರಮಣ ಅಪರಾಧ ಮಾಡಲೆಂದು ಸಭೆ ಸೇರುವುದು ಅಥವಾ ಕ್ರಿಮಿನಲ್ ಬಲ ತೋರಿಸಿ ಯಾರದ್ದಾದರೂ ಆಸ್ತಿ ಸ್ವಾಧೀನಪಡಿಸುವುದು, ಕ್ರಿಮಿನಲ್ ಬಲದ ಮೂಲಕ ದಾರಿಯ ಹಕ್ಕು, ನೀರಿನ ಬಳಕೆ ಹಕ್ಕನ್ನು ಕಸಿದುಕೊಳ್ಳಲು ಸಭೆ ಸೇರುವುದು ಅಥವ ಸಾರ್ವಜನಿಕ ಸ್ಥಳವನ್ನು ಅನುಭೋಗಿಸಿ/ವಶಪಡಿಸುವುದು/ ಗುಂಪಾಗಿ ಆಕ್ರಮಿಸುವುದು ಅಥವಾ ಕ್ರಿಮಿನಲ್ ಬಲದ ಮೂಲಕ ವ್ಯಕ್ತಿಯನ್ನು ಅವನ ಇಚ್ಚೆಗೆ ವಿರುದ್ದವಾದುದನ್ನು ಮಾಡಲು ಒತ್ತಾಯಿಸಲು ಸಭೆ ಸೇರುವುದು ಕಾನೂನುಬಾಹಿರ ಸಭೆ/ಅಕ್ರಮ ಕೂಟ / unlawful assembly ಅಡಿಯಲ್ಲಿ ಬರುತ್ತದೆ ಎಂದು IPC 141 ಸ್ಪಷ್ಟವಾಗಿ ಹೇಳುತ್ತದೆ.
ಈ ಮೇಲಿನ ಕೃತ್ಯವನ್ನು ಮಾಡಲೆಂದೇ ಅಕ್ರಮ ಕೂಟ ಸೇರುವುದನ್ನು unlawful assembly ಎಂದು ಕಾನೂನು ವ್ಯಾಖ್ಯಾನಿಸುತ್ತದೆ.
ಕ್ರಿಮಿನಲ್ ಕೃತ್ಯ ನಡೆಸುವ ಪಿತೂರಿಯಿಂದಲೋ, ಕ್ರಿಮಿನಲ್ ಬಲ ಪ್ರಯೋಗ ಮಾಡಲೆಂದು ಪ್ರಾರ್ಥನೆ ನಡೆಸುತ್ತಿದ್ದರೆ ? ಪ್ರಾರ್ಥನೆ ಈ ಕಾನೂನಿನಡಿಯಲ್ಲಿ ಹೇಗೆ ಕಾನೂನುಬಾಹಿರ ಸಭೆ/ಅಕ್ರಮ ಕೂಟ / unlawful assembly ಆಗುತ್ತದೆ ? ಹೇಗೆ ಈ ಪ್ರಾರ್ಥನೆಗೆ 143 ಅನ್ವಯವಾಗುತ್ತದೆ ? ಪ್ರಾರ್ಥನೆಯನ್ನು ಕ್ರಿಮಿನಲ್ ಕೃತ್ಯ ನಡೆಸುವ ಅಕ್ರಮ ಕೂಟ ಎಂದು ಕರೆದ ಪೊಲೀಸರು ನಾಳೆ ಜಾತ್ರೆಗೆಂದು ರಸ್ತೆಯಲ್ಲಿ ಸೇರುವ ನೂರಾರು, ಸಾವಿರಾರು ಜನರನ್ನು ಏನೆಂದು ಕರೆಯುತ್ತಾರೆ?


ಇಷ್ಟು ಸಾಲದೆಂಬಂತೆ ಪೊಲೀಸರು ಐಪಿಸಿ 149 ಕೂಡಾ ದಾಖಲಿಸುತ್ತಾರೆ. IPC 149 ಯಾವಾಗ ದಾಖಲಿಸಬೇಕು ಎಂದರೆ “ಯಾವುದಾದರೂ ಕ್ರಿಮಿನಲ್ ಕೃತ್ಯವನ್ನು ಮಾಡಬೇಕು ಎಂಬ ಸಮಾನ ಉದ್ದೇಶದಿಂದ ಸಭೆ ಸೇರಿದಾಗ/ ಗುಂಪುಗೂಡಿದಾಗ” ಮಾತ್ರ ಈ ಸೆಕ್ಷನ್ ಅನ್ನು ಬಳಸಬೇಕು. ರೆಹಮಾನಿಯಾ ಮಸೀದಿ ಎದುರು ಸೇರಿರುವ 8 ರಿಂದ 10 ಜನ ಪ್ರಾರ್ಥನೆ ಮಾಡುವ ಸಮಾನ ಉದ್ದೇಶ ಹೊರತುಪಡಿಸಿ ಇನ್ನಾವುದೇ ಉದ್ದೇಶ ಹೊಂದಿಲ್ಲ ಎಂಬುದು ಘಟನೆಯನ್ನು/ವಿಡಿಯೋವನ್ನು ನೋಡಿದ ಯಾರಿಗಾದರೂ ಅರ್ಥವಾಗುತ್ತದೆ. ಆದರೂ ಕ್ರಿಮಿನಲ್ ಚಟುವಟಿಕೆ ಮಾಡಲೆಂಬ ಉದ್ದೇಶದಿಂದಲೇ ಸಭೆ ಸೇರಿದ್ದಾರೆ ಎಂದು ಪೊಲೀಸರು ಸೆಕ್ಷನ್ ದಾಖಲಿಸಿರುವುದು ಅಘಾತಕಾರಿ


ಪ್ರಾರ್ಥನೆ ರಸ್ತೆಯಲ್ಲಿ ನಡೆದಿದೆ. ಈ ಪ್ರಾರ್ಥನೆಯಿಂದ ರಸ್ತೆ ತಡೆ ಆಗಿದೆ. ಇಷ್ಟು ಬಿಟ್ಟರೆ ಬೇರಾವ ಕ್ರಿಮಿನಲ್ ಕೃತ್ಯವೂ ನಡೆದಿಲ್ಲ. ಶುಕ್ರವಾರದ ದಿನ ಕೊನೇ ಕ್ಷಣದಲ್ಲಿ ಮಸೀದಿಗೆ ಬಂದವರಿಗೆ ಮಸೀದಿಯೊಳಗೆ ಪ್ರಾರ್ಥನೆಗೆ ಜಾಗ ಸಾಲಲಿಲ್ಲ ಎಂದು ಹೊರಗೆ ನಿಂತಿದ್ದಾರೆಯೇ ಹೊರತು ಅವರಿಗೆ ರಸ್ತೆ ತಡೆದು ಯಾರನ್ನೋ ಪ್ರತಿಭಟಿಸುವ/ಟೀಕಿಸುವ/ಹಂಗಿಸುವ/ ತಡೆಯುವ/ಕಿಡಿಗೇಡಿತನ ಮಾಡುವ/ದಾಳಿ ಮಾಡುವ ಉದ್ದೇಶ ಹೊಂದಿಲ್ಲ. ಆದರೂ ಮಂಗಳೂರು ಪೂರ್ವ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಸಣ್ಣ ಕಾನೂನು ಉಲ್ಲಂಘನೆಯನ್ನೂ ಮಾಡಲು ಬಿಡದ ಪ್ರಾಮಾಣಿಕ ಪೊಲೀಸರೇ ಇರುವುದರಿಂದ ರಸ್ತೆ ತಡೆಯ ದೂರಿಗಾಗಿ ಐಪಿಸಿ 283 ದಾಖಲಿಸುವ ಅವಕಾಶವಷ್ಟೇ ಇದೆ. ಅದರ ಬದಲು ಪ್ರಾರ್ಥನೆಯನ್ನೇ ಕ್ರಿಮಿನಲೈಸ್/ ಕ್ರಿಮಿನಲ್ ಕೃತ್ಯ ಮಾಡಲೆಂದೇ ಸೇರಿದ ಸಭೆ ಎಂದು ಸೆಕ್ಷನ್ ಹಾಕಿದ ಪೊಲೀಸರ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಯಾಕೆಂದರೆ ಇದು ಪೊಲೀಸರ ದಡ್ಡತನವಲ್ಲ, ಬದಲಾಗಿ ಮನಸ್ಥಿತಿ.



Join Whatsapp