ಸುರತ್ಕಲ್: ಮಧ್ಯ ಗ್ರಾಮದಲ್ಲಿರುವ ದೇವಸ್ಥಾನದ ಹತ್ತಿರ ಬಾಲಕನೊಬ್ಬನಿಗೆ ಚೂರಿ ತೋರಿಸಿ ಬೆದರಿಸಿ 15 ಪವನ್ ಚಿನ್ನ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಂಜಿತ್ ಪೂಜಾರಿ ಯಾನೆ ರಂಜು ( 25) ಮತ್ತು ಮಂಜುನಾಥ ಯಾನೆ ಮಂಜ (25) ಎಂದು ಗುರುತಿಸಲಾಗಿದೆ.
ಏಪ್ರಿಲ್ 20ರಂದು ದನ ಮೇಯಿಸಲು ಹೋದ ಮಧ್ಯ ಗ್ರಾಮದ ದೇವಸ್ಥಾನದ ಬಳಿ ಬಾಬು ದೇವಾಡಿಗ ಎಂಬವರ ಮಗ 14 ವರ್ಷದ ಭರತ್ ನನ್ನು ಬೆದರಿಸಿದ ಆರೋಪಿಗಳು ನೀನು ಮನೆಯಿಂದ ಚಿನ್ನವನ್ನು ತಂದುಕೊಡಬೇಕು ಇಲ್ಲದಿದ್ದರೆ ನೀರಿನಲ್ಲಿ ಮುಳುಗಿಸಿ ಕೊಲ್ಲುತ್ತೇವೆ ಎಂದು ಬೆದರಿಸಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ಗಮನಿಸಿದ ಆರೋಪಿಗಳು ಭರತ್ ನನ್ನು ಆತನ ಮನೆಗೆ ಕರೆದುಕೊಂಡು ಹೋಗಿ ಚೂರಿ ತೋರಿಸಿ, ಕಪಾಟಿನ ಬೀಗವನ್ನು ಕೊಡಲು ಹೇಳಿ ಕವಾಟಿನಿಂದ 15 ಪವನ್ ಚಿನ್ನವನ್ನು ದರೋಡೆ ಮಾಡಿದ್ದರು. ಇಷ್ಟು ಮಾತ್ರವಲ್ಲದೆ ಈ ವಿಷಯವನ್ನು ಮನೆಯವರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಸಿ ಹೋಗಿದ್ದಾರೆ. ಈಗ ಸುಮಾರು 3 ದಿನದ ಹಿಂದೆ ಮೇ 5 ತಾರೀಖಿನಂದು ಪುನಃ ಯುವಕರಿಬ್ಬರು 70,000ರೂ. ಎರಡು ದಿನದೊಳಗೆ ತಂದು ಕೊಡಬೇಕು ಇಲ್ಲದಿದ್ದರೆ ನಿನ್ನನ್ನು ಕೊಲ್ಲುತ್ತೇವೆ ಎಂದು ಬೆದರಿಸಿದ್ದಾರೆ ಎನ್ನಲಾಗಿದೆ.
ಹೆದರಿದ ಹುಡುಗ ತಂದೆ ತಾಯಿ ಹತ್ತಿರ ವಿಷಯ ತಿಳಿಸಿದ್ದು, ವಿಷಯ ತಿಳಿದ ಕೂಡಲೇ ಹುಡುಗನ ತಂದೆ ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಲೀಸರು ಯುವಕರಿಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಯುವಕರಿಬ್ಬರು ಈ ಮೊದಲು ಹಲವು ಕಳ್ಳತನಗಳಲ್ಲಿ ಭಾಗಿಯಾಗಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ.