Home ಟಾಪ್ ಸುದ್ದಿಗಳು “ಹೊಲೆ ಮಾದಿಗರ ಹಾಡು” ಖ್ಯಾತಿಯ ಕವಿ, ಸಾಹಿತಿ ಡಾ. ಸಿದ್ದಲಿಂಗಯ್ಯ ನಿಧನ

“ಹೊಲೆ ಮಾದಿಗರ ಹಾಡು” ಖ್ಯಾತಿಯ ಕವಿ, ಸಾಹಿತಿ ಡಾ. ಸಿದ್ದಲಿಂಗಯ್ಯ ನಿಧನ

ಬೆಂಗಳೂರು : ಹಿರಿಯ ಕವಿ, ದಲಿತ ಸಾಹಿತಿ ಡಾ.ಸಿದ್ದಲಿಂಗಯ್ಯ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಕೊರೋನಾ ಸೋಂಕಿಗೆ ತುತ್ತಾಗಿದ್ದ ಸಿದ್ದಲಿಂಗಯ್ಯ ಅವರನ್ನು ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶುಕ್ರವಾರ ನಿಧನರಾಗಿದ್ದಾರೆ.


ಸಿದ್ದಲಿಂಗಯ್ಯನವರು ಕನ್ನಡದ ಶ್ರೇಷ್ಠ ಲೇಖಕರಲ್ಲೊಬ್ಬರು. ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದ ಅವರು ಅಧ್ಯಾಪನ-ಬರವಣಿಗೆಗಳಲ್ಲಿಯೂ ತಮ್ಮನ್ನು ತೊಡಗಿಕೊಂಡಿದ್ದರು.


ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ‘ಮಾಗಡಿ’ ತಾಲ್ಲೋಕಿನ ‘ಮಂಚನಬೆಲೆ’ ಗ್ರಾಮದಲ್ಲಿ 1954 ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.
ಮಾಗಡಿಯ ಹೊಸಹಳ್ಳಿಯ ಬಿಸಿಲಮ್ಮನ ಗುಡಿಯಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿದ ಸಿದ್ಧಲಿಂಗಯ್ಯನವರು 1974ರ ವರ್ಷದಲ್ಲಿ ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಿಂದ ಬಿ.ಎ. ಆನರ್ಸ್ (ಐಚ್ಛಿಕ ಕನ್ನಡ) ಪದವಿಯನ್ನು ಪಡೆದರಲ್ಲದೆ. 1976ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರೊ. ಡಿ.ಎಲ್. ನರಸಿಂಹಾಚಾರ್ಯರ ಸ್ವರ್ಣಪದಕದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಎಂ.ಎ. ಪದವಿಯನ್ನು ಪಡೆದಿದ್ದರು.


ಪ್ರೊ. ಜಿ.ಎಸ್. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ ‘ಗ್ರಾಮದೇವತೆಗಳು’ ಎಂಬ ಪ್ರೌಢ ಪ್ರಬಂಧವನ್ನು ಮಂಡಿಸಿ 1989ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನು ಗಳಿಸಿದದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದ ಸಿದ್ಧಲಿಂಗಯ್ಯನವರು, ಪ್ರಾಧ್ಯಾಪಕರಾಗಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೇ ಸಮಾಜದಲ್ಲಿನ ಅಸಮಾನತೆಗಳ ಬಗ್ಗೆ ತಮ್ಮೊಳಗೆ ಮೊಳೆಯುತ್ತಿದ್ದ ಸಿಟ್ಟು, ಆಕ್ರೋಶಗಳನ್ನೂ ವ್ಯಕ್ತಿಪಡಿಸಲು ಸಿದ್ದಲಿಂಗಯ್ಯನವರು ಆಯ್ದುಕೊಂಡದ್ದು ಕಾವ್ಯ ಮಾಧ್ಯಮ. ಹೀಗೆ ಅವರು ಬರೆದ ಹಲವಾರು ಕವನಗಳ ಸಂಕಲನ ‘ಹೊಲೆಮಾದಿಗರ ಹಾಡು’ 1975ರಲ್ಲಿ ಪ್ರಕಟಗೊಂಡಿತು. ಮುಂದೆ ಅವರ ‘ಸಾವಿರಾರು ನದಿಗಳು’, ‘ಕಪ್ಪುಕಾಡಿನ ಹಾಡು’, ‘ಮೆರವಣಿಗೆ’, ‘ನನ್ನ ಜನಗಳು ಮತ್ತು ಇತರ ಕವಿತೆಗಳು’, ‘ಆಯ್ದ ಕವನಗಳು’ ಮುಂತಾದ ಕವನ ಸಂಕಲನಗಳು ಪ್ರಕಟಗೊಂಡಿವೆ.
ಸಿದ್ಧಲಿಂಗಯ್ಯನವರ ‘ಊರು ಕೇರಿ’ ಆತ್ಮಕಥೆ ಇಂಗ್ಲಿಷ್ ಹಾಗೂ ತಮಿಳಿಗೂ ಅನುವಾದಗೊಂಡಿದ್ದು ಇಂಗ್ಲಿಷ್ ಅನುವಾದವನ್ನು ಕೇಂದ್ರ ಸಾಹಿತ್ಯ ಅಕಾಡಮಿಯು ಪ್ರಕಟಿಸಿದೆ. ಸಿದ್ಧಲಿಂಗಯ್ಯನವರ ಹಲವಾರು ಕವಿತೆಗಳು ಇಂಗ್ಲಿಷ್, ಹಿಂದಿ, ತಮಿಳು, ಬಂಗಾಳಿ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಅನುವಾದಗೊಂಡಿವೆ.


ಸಿದ್ಧಲಿಂಗಯ್ಯನವರು ಪುಟ್ಟಣ್ಣ ಕಣಗಾಲರು ನಿರ್ದೇಶಿಸಿದ ‘ಧರಣಿಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ಬರೆದ ಗೀತೆಗೆ 1983-84ರಲ್ಲಿ ರಾಜ್ಯಪ್ರಶಸ್ತಿ ಸಂದಿದೆ.
ಪಣಜಿಯಲ್ಲಿ ನಡೆದ ಭಾರತೀಯ ಕನ್ನಡ ಸಮ್ಮೇಳನದ ಅಧ್ಯಕ್ಷತೆ, ಗೋರೆಗಾಂವ್ನ ವಿಚಾರ ಭಾರತಿ ಸಮ್ಮೇಳನದ ಅಧ್ಯಕ್ಷತೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬೀದರ ನಲ್ಲಿ ನಡೆದ ಶರಣ ಸಮ್ಮೇಳನದ ಅಧ್ಯಕ್ಷತೆ, ಮತ್ತು ಹಂಪಿ ಉತ್ಸವದಲ್ಲಿ, ಮೈಸೂರು ದಸರಾ ಮಹೋತ್ಸವದಲ್ಲಿ, ದೆಹಲಿಯಲ್ಲಿ ನಡೆದ ದಕ್ಷಿಣ ಪ್ರಾಂತೀಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ, ಆಳ್ವಾಸ್ ನುಡಿಸಿರಿ ಸಮ್ಮೇಳನ ಹಾಗೂ ಶ್ರವಣಬೆಳಗೊಳದಲ್ಲಿ 81ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಗೌರವಗಳು ಸಿದ್ಧಲಿಂಗಯ್ಯನವರನ್ನರಸಿ ಬಂದಿದ್ದವು.
ಸಿದ್ಧಲಿಂಗಯ್ಯನವರು ನಿರಂತರವಾಗಿ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತ ಬಂದಿದ್ದು ಜಾನಪದ ಸಾಹಿತ್ಯ ಸಂಪಾದಕ ಮಂಡ, ಅಂಬೇಡ್ಕರ್ ಕೃತಿಗಳ ಕನ್ನಡ ಭಾಷಾಂತರ ಮತ್ತು ಸಂಪಾದನಾ ಸಮಿತಿ, ರಾಮಮನೋಹರ ಲೋಹಿಯಾ ಅವರ ಕೃತಿಗಳ ಭಾಷಾಂತರ ಮತ್ತು ಸಂಪಾದನಾ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಲಿ ಮುಂತಾದವುಗಳಲ್ಲಿ ಸದಸ್ಯರಾಗಿರುವುದರ ಜೊತೆಗೆ ದಲಿತ ಸಂಘರ್ಷ ಸಮಿತಿ, ಬಂಡಾಯ ಸಾಹಿತ್ಯ ಸಂಘಟನೆಗಳ ಸ್ಥಾಪಕ ಸದಸ್ಯರಾಗಿದ್ದರು.

ಸಿದ್ಧಲಿಂಗಯ್ಯನವರ ಸೃಜನಶೀಲ ಸಾಹಿತ್ಯ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಡಾ. ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಬಾಬು ಜಗಜೀವನ ರಾಮ್ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಸಂದಿವೆ. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ 1988-94, 1995-2001 ರವರೆಗೆ ಎರಡುಬಾರಿ ನಾಮಕರಣಗೊಂಡಿರುವುದರ ಜೊತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ 2006-08 ಅವಧಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸಿದ್ಧಲಿಂಗಯ್ಯನವರು ಹಿಂದಿನ ಸಾಲಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.


ಸಿದ್ದಲಿಂಗಯ್ಯ ಅವರ ನಿಧನಕ್ಕೆ ನಾಡಿನ ಅನೇಕ ಸಾಹಿತಿಗಳು, ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ

Join Whatsapp
Exit mobile version