Home ಟಾಪ್ ಸುದ್ದಿಗಳು ರೈತ ಪ್ರತಿಭಟನೆಯ ಬಿಸಿ; ಆನ್‌ ಲೈನ್‌ ನಲ್ಲೇ ಕಾರ್ಯಕ್ರಮ ಉದ್ಘಾಟಿಸಿದ ಹರ್ಯಾಣ ಸಿಎಂ ಖಟ್ಟರ್‌

ರೈತ ಪ್ರತಿಭಟನೆಯ ಬಿಸಿ; ಆನ್‌ ಲೈನ್‌ ನಲ್ಲೇ ಕಾರ್ಯಕ್ರಮ ಉದ್ಘಾಟಿಸಿದ ಹರ್ಯಾಣ ಸಿಎಂ ಖಟ್ಟರ್‌

ನವದೆಹಲಿ : ಕೇಂದ್ರದ ಪ್ರಧಾನಿ ಮೋದಿ ಸರಕಾರದ ಮೂರು ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಬಿಸಿ ಪಂಜಾಬ್‌, ಹರ್ಯಾಣ, ಉತ್ತರ ಪ್ರದೇಶದಲ್ಲಿ ತೀವ್ರವಾಗಿದೆ. ಅದರಲ್ಲೂ ಹರ್ಯಾಣದಲ್ಲಿ ಬಿಜೆಪಿ ನಾಯಕರು ಆಡಳಿತಾತ್ಮಕ ಕಾರ್ಯಕ್ರಮಗಳಲ್ಲಿ ಭಾಗಿಯಾಗದಂತೆ ರೈತರು ಅಡ್ಡಿಪಡಿಸುತ್ತಿರುವುದು ಆತಂಕವನ್ನು ಸೃಷ್ಟಿಸಿದೆ. ಇದೇ ಆತಂಕದಿಂದ ಹರ್ಯಾಣ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಇದೀಗ ಅಭಿವೃದ್ಧಿ ಯೋಜನೆಗಳ ಶಂಕು ಸ್ಥಾಪನೆಯನ್ನು ಆನ್‌ ಲೈನ್‌ ಮೂಲಕವೇ ನಿರ್ವಹಿಸಿರುವ ಘಟನೆ ನಡೆದಿದೆ.

ಗುರುವಾರ ನಡೆದ ಹದಿನಾರು ಜಿಲ್ಲೆಗಳಲ್ಲಿನ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆಯನ್ನು ಖಟ್ಟರ್‌ ಆನ್‌ ಲೈನ್‌ ಮೂಲಕವೇ ಉದ್ಘಾಟಿಸಿದ್ದಾರೆ ಎನ್ನಲಾಗಿದೆ.

ಇದೇ ಕಾರ್ಯಕ್ರಮದ ಭಾಗವಾಗಿ ದಾದ್ರಿಗೆ ಭೇಟಿ ನೀಡಿದ್ದ ಹರ್ಯಾಣ ಮಹಿಳಾ ಅಭಿವೃದ್ಧಿ ಇಲಾಖೆಯ ಅಧ್ಯಕ್ಷೆ ಬಬಿತಾ ಪೋಗಟ್‌ ಮತ್ತು ಕೈತಾಲ್‌ ಗೆ ತೆರಳಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಮಲೇಶ್‌ ಧಂಡಾ ವಿರುದ್ಧ ರೈತರು ಕಪ್ಪು ಧ್ವಜ ಪ್ರದರ್ಶಿಸಿ ಆಕ್ರೋಶ ಹೊರಹಾಕಿದ್ದಾರೆ. ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಹೊರಗೆ ರೈತರ ಪ್ರತಿಭಟನೆ ನಡೆಯುತ್ತಿದ್ದುದರಿಂದ, ಬಬಿತಾ ಪೋಗಟ್‌ ರನ್ನು ಅಲ್ಲಿಂದ ನಿರ್ಗಮಿಸಲು ಅಧಿಕಾರಿಗಳು ಬೇರೆ ಮಾರ್ಗ ಬಳಸಿದ ಘಟನೆ ನಡೆದಿದೆ.

ಹೀಗೆ ವಿವಿಧೆಡೆ ರೈತರ ಪ್ರತಿಭಟನೆಯ ಬಿಸಿ ಬಿಜೆಪಿಗರು ಮತ್ತು ಆಡಳಿತಕ್ಕೆ ತಟ್ಟಿದೆ. ಕಳೆದ ವಾರ ಕರ್ನಾಲ್‌ ನಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಖಟ್ಟರ್‌ ರಿಂದ ಗಿಡ ನೆಡುವ ಕಾರ್ಯಕ್ರಮವಿತ್ತು. ಆದರೆ, ಅಲ್ಲಿ ರೈತರು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರು. ಇದರ ಸುಳಿವು ದೊರಕಿದ ಹಿನ್ನೆಲೆಯಲ್ಲಿ ಖಟ್ಟರ್‌ ಒಂದೂವರೆ ಗಂಟೆ ಮುಂಚೆಯೇ ಆಗಮಿಸಿ, ಗಡಿಬಿಡಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಹೋಗಿದ್ದರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ವೈಯಕ್ತಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಆಡಳಿತಾತ್ಮಕ ಅಥವಾ ರಾಜಕೀಯವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಬಿಜೆಪಿಗರು ಭಾಗವಹಿಸುವಲ್ಲೆಲ್ಲಾ ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ.

Join Whatsapp
Exit mobile version