ಮುಂಬೈ: 2019 ರ ಅಕ್ಟೋಬರ್ ನಲ್ಲಿ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯಲ್ಲಿ ಎನ್.ಸಿ.ಪಿ – ಬಿಜೆಪಿ ಮೈತ್ರಿ ಸರ್ಕಾರದ ಕುರಿತ ಪ್ರಧಾನಿ ನರೇಂದ್ರ ಮೋದಿಯ ಮನವಿಯನ್ನು ತಿರಸ್ಕರಿಸಿದ್ದೇನೆ ಎಂದು ಎನ್.ಸಿ.ಪಿ ಮುಖ್ಯಸ್ಥ ಶರದ್ ಪವಾರ್ ಘೋಷಿಸಿದ್ದಾರೆ. ಸದ್ಯ ಶರದ್ ಅವರ ಈ ಹೇಳಿಕೆ ರಾಷ್ಟ್ರ ರಾಜಕೀಯದಲ್ಲಿ ಭಾರೀ ಕೋಲಾಹಲವೆಬ್ಬಿಸಿದೆ.
ದಿ ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ನ ‘ಲೋಕಸತ್ತಾ’ ಮರಾಠಿ ದೈನಿಕವನ್ನು ಬಿಡುಗಡೆ ಮಾಡಿ ಮಾತನಾಡಿದ ಪವಾರ್, ನವೆಂಬರ್ 20, 2019 ರಂದು ಪ್ರಧಾನಿಯೊಂದಿಗಿನ ಭೇಟಿಯನ್ನು ಉಲ್ಲೇಖಿಸಿ, ಪ್ರಧಾನಿ ಮೋದಿ ಉಭಯ ಪಕ್ಷಗಳ ಮೈತ್ರಿ ಕುರಿತು ಪ್ರಸ್ತಾಪಿಸಿದರಲ್ಲದೆ ಪುತ್ರಿ, ಸಂಸದೆ ಸುಪ್ರಿಯಾ ಸುಳೆಗೆ ಕೇಂದ್ರ ಸರ್ಕಾರದಲ್ಲಿ ಸಂಪುಟ ದರ್ಜೆಯ ಸ್ಥಾನದ ಆಫರ್ ಕೂಡ ನೀಡಿದ್ದರು. ಈ ವೇಳೆ ಎಲ್ಲಾ ಆಫರ್ ಗಳನ್ನು ತಿರಸ್ಕರಿಸಿದ್ದೇನೆ ಎಂದು ಅವರು ತಿಳಿಸಿದರು.