ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಕೂಳೂರು ಸೇತುವೆ ಮೇಲಿನ ಗುಂಡಿಗಳನ್ನು ಮುಚ್ಚುವ ಸಲುವಾಗಿ ಹಾಕಿದ್ದ ಡಾಂಬರು ಹತ್ತೇ ದಿನಗಳಲ್ಲಿ ಕಿತ್ತುಹೋಗಿದೆ.
ನವಮಂಗಳೂರು ಬಂದರಿನಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಸೆ.2ರಂದು ನಗರಕ್ಕೆ ಭೇಟಿ ನೀಡಿದ್ದರು. ಮೋದಿ ಸಾಗುವ ರಸ್ತೆಯಲ್ಲಿದ್ದ ಗುಂಡಿಗಳನ್ನು ಕಾರ್ಯಕ್ರಮಕ್ಕೆ ತರಾತುರಿಯಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಆದರೆ ಈ ಹೆದ್ದಾರಿಯಲ್ಲಿ ಮತ್ತೆ ಡಾಂಬರು ಕಿತ್ತು ಹೋಗಿ ಗುಂಡಿಗಳು ಕಾಣಿಸಿಕೊಂಡಿವೆ.
ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಡಾಂಬರೀಕರಣ ನಡೆಸಿದ ಹತ್ತೇ ದಿನಗಳಲ್ಲೇ ಹೆದ್ದಾರಿಯಲ್ಲಿ ಮತ್ತೆ ಗುಂಡಿ ನಿರ್ಮಾಣವಾಗುವ ಮೂಲಕ ಈ ಕಾಮಗಾರಿಯ ಅಸಲಿಯತ್ತು ಬಯಲಾಗಿದೆ ಎಂದಿದ್ದಾರೆ. ಇದರಲ್ಲಿ ಕೂಡ 40% ಕಮಿಷನ್ ಇರಬಹುದು ಎಂದು ಟೀಕಿಸಿದ್ದಾರೆ.
ಪ್ರಧಾನಿ ಮೋದಿ ಬೆಂಗಳೂರು ಭೇಟಿಯ ವೇಳೆಯಲ್ಲಿಯೂ ಇದೇ ರೀತಿ ಸಂಭವಿಸಿತ್ತು. ಜನರು ಪ್ರಧಾನಿಗೆ ಟ್ವೀಟ್ ಮಾಡಿ ದೂರು ನೀಡಿದ್ದರು. ಈ ಬಗ್ಗೆ ತನಿಖೆಗೂ ಆದೇಶಿಸಲಾಗಿತ್ತು.