Home ಟಾಪ್ ಸುದ್ದಿಗಳು ಕೊಲೆ ಯತ್ನ ಆರೋಪ ಹೊತ್ತಿರುವ ಬಿಜೆಪಿ ಅಭ್ಯರ್ಥಿ ಪರ ಪ್ರಧಾನಿ ಮೋದಿ ರೋಡ್ ಶೋ: ವ್ಯಾಪಕ...

ಕೊಲೆ ಯತ್ನ ಆರೋಪ ಹೊತ್ತಿರುವ ಬಿಜೆಪಿ ಅಭ್ಯರ್ಥಿ ಪರ ಪ್ರಧಾನಿ ಮೋದಿ ರೋಡ್ ಶೋ: ವ್ಯಾಪಕ ಆಕ್ರೋಶ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದು, ಈ ರೋಡ್ ಶೋ ಶಿವಾಜಿನಗರ ಕ್ಷೇತ್ರದಲ್ಲೂ ಸಾಗಿದೆ. ಶಿವಾಜಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಎನ್.ಚಂದ್ರ ಅವರು ಕೊಲೆ ಯತ್ನ ಪ್ರಕರಣದ ಆರೋಪಿಯಾಗಿದ್ದು, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿ ಪರ ಪ್ರಧಾನಿ ಮೋದಿ ರೋಡ್ ಶೋ ನಡೆಸಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಕೊಲೆ ಯತ್ನ ಆರೋಪಿಯ ಪರ ಮೋದಿ ಬೀದಿಗಳಿಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಹಲವಾರು ಪ್ರಶ್ನೆ ಮಾಡಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಆಮ್ ಆದ್ಮಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಮುಕುಂದ್ ಗೌಡ, ಬಸವಣ್ಣನ ವಚನ “ಇವ ನಮ್ಮವ ಇವ ನಮ್ಮವ” ಎಂಬಂತೆ  ರೌಡಿ, ಕೊಲೆಗಾರರು, ವಂಚಕರು ಮತ್ತು ಸಮಾಜ ಘಾತುಕರೂ ನಮ್ಮವರೇ ಎಂದು ತೋರಿಸಲು ಹೊರಟಿದ್ದಾರೆ ಮೋದಿ.  ಇದರಿಂದ ನಿಧಾನವಾಗಿ ಬಿಜೆಪಿ ಒಂದು ರೌಡಿಸಂ ಕೇಂದ್ರಿತ ಪಕ್ಷವಾಗುತ್ತಾ, ಜನರಲ್‌ ಟ್ರೆಂಡ್‌ ಆಗಿಬಿಡುತ್ತದೆ. ಒಂದು ರಾಷ್ಟ್ರೀಯ ಪಕ್ಷದ ನಾಯಕನಿಗೆ, ದೇಶದ ಪ್ರಧಾನಿಗೆ ಇಂಥಾ ಗತಿ ಬರಬಾರದಿತ್ತು ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ರಿಝ್ವಾನ್ ಆರ್ಶದ್ ಮಾತನಾಡಿ, ಬಿಜೆಪಿ ಒಂದು ನಾಟಕ ಪಕ್ಷವಾಗಿದೆ. ಸಮಾಜಘಾತಕರು ಯಾರ ಕಡೆ ಇದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಮುಂದೆ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಅಕ್ರಮ ಗಣಿಗಾರಿಕೆ ಸಂಬಂಧ ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥರೂ ಆಗಿದ್ದ ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಅರಣ್ಯ ಸಂರ- ಕ್ಷಣಾಧಿಕಾರಿ ಡಾ.ಯು.ವಿ.ಸಿಂಗ್ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ಅಮೃತಹಳ್ಳಿ ಠಾಣೆಯಲ್ಲಿ 2011ರಲ್ಲಿ ಪ್ರಕರಣ ದಾಖಲಾಗಿದೆ. 65ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ. ಇದೇ ಪ್ರಕರಣದಲ್ಲಿ ಚಂದ್ರ ಅವರ ಸಹೋದರ ಶರವಣನ್ (32) ಮತ್ತು ಮುನಿರೆಡ್ಡಿಪಾಳ್ಯದ ಮಂಜು ಅಲಿಯಾಸ್ ಭರತ್‌ ಸಿಂಗ್ (27) ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಚಂದ್ರ ತಲೆಮರೆಸಿ ಕೊಂಡಿದ್ದರು. ನಂತರ, ಜಾಮೀನು ಸಿಕ್ಕಿತ್ತು.

Join Whatsapp
Exit mobile version