Home ಕರಾವಳಿ ಎರಡು ಕೋಟಿ ಉದ್ಯೋಗದ ಭರವಸೆ ನೀಡಿದ್ದ ಪ್ರಧಾನಿ ಮೋದಿ ಖಾಲಿ ಹುದ್ದೆಗಳನ್ನೇ ಭರ್ತಿ ಮಾಡಿಲ್ಲ: ರಮಾನಾಥ...

ಎರಡು ಕೋಟಿ ಉದ್ಯೋಗದ ಭರವಸೆ ನೀಡಿದ್ದ ಪ್ರಧಾನಿ ಮೋದಿ ಖಾಲಿ ಹುದ್ದೆಗಳನ್ನೇ ಭರ್ತಿ ಮಾಡಿಲ್ಲ: ರಮಾನಾಥ ರೈ

►► ಐದು ವರ್ಷ ಸೇವೆ ಸಲ್ಲಿಸಿದರೆ ಪಿಂಚಣಿ ಕೊಡಬೇಕು, ಅದಕ್ಕಾಗಿ ನಾಲ್ಕು ವರುಷ ಸೇವೆಯ ಬುದ್ಧಿವಂತಿಕೆ

ಮಂಗಳೂರು: ಅಗ್ನಿಪಥ್ ಯೋಜನೆಯ ಹೆಸರಿನಲ್ಲಿ ಸೈನಿಕರ ನೇಮಕಾತಿಯಲ್ಲಿ ಹೊರಗುತ್ತಿಗೆ, ನಾಲ್ಕು ವರುಷಗಳ ನಿರುದ್ಯೋಗ ಯೋಜನೆ ಆಗಿದೆ. ಎರಡು ಕೋಟಿ ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಖಾಲಿ ಇರುವ ಹುದ್ದೆಗಳನ್ನು ಕೂಡ ಭರ್ತಿ ಮಾಡಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು.

ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷ ನೇಮಕಾತಿ ನಡೆದಿಲ್ಲ. ಕೆಲವರ ಆಯ್ಕೆ ಪ್ರಕ್ರಿಯೆ ಆಗಿತ್ತು. ಅವರಿಗೆ ಅಗ್ನಿಪಥ ಯೋಜನೆಯು ಮಾರಕವಾಗಿದೆ. ಐದು ವರ್ಷ ಸೇವೆ ಸಲ್ಲಿಸಿದರೆ ಪಿಂಚಣಿ ಕೊಡಬೇಕು. ಅದನ್ನು ತಪ್ಪಿಸಲು ನಾಲ್ಕು ವರ್ಷ ಸೇವೆಯ ಬುದ್ಧಿವಂತಿಕೆ ತೋರಲಾಗಿದೆ. ಸಂಬಳ ಒಂಬತ್ತು ಸಾವಿರ. ಬೇರೆಲ್ಲ ಸೇರಿಸಿ‌ ಮೂವತ್ತು ಸಾವಿರ ಕೊಡುವುದಾಗಿ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಾಲ್ಕು ವರ್ಷದ ಬಳಿಕ ಇವರಿಗೆ ವಾಚ್ ಮನ್ ಕೆಲಸ ಕೊಡುವುದಾಗಿ ಬಿಜೆಪಿ ಕಚೇರಿಯವರು, ಕೆಲವು ಉದ್ಯಮಿಗಳು ಹೇಳಿರುವುದು ಸೇನೆಯನ್ನು ಕೆಳ ದರ್ಜೆಗೆ ಇಳಿಸುವುದಾಗಿದೆ. ನಾಲ್ಕು ವರ್ಷದ ಬಳಿಕ ಕ್ಯಾಂಟೀನ್ ಸವಲತ್ತು, ಆರೋಗ್ಯ ಭಾಗ್ಯ ಯಾವುದೇ ಅನುಕೂಲ ಸಿಗಲ್ಲ, ತರಬೇತಿಗೆ ನಾಲ್ಕು ವರ್ಷಗಳು ಬೇಕು. ಇದು ಸೇನೆಗೆ ಶಕ್ತಿ ತುಂಬುವ ಯೋಜನೆ ಅಲ್ಲ ಎಂದು ರಮಾನಥ ರೈ ಹೇಳಿದರು.

ದಿಲ್ಲಿಯ ಜಂತರ್ ಮಂತರ್ ಸಹಿತ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ‘ಅಗ್ನಿಪಥ’ ವಿರುದ್ಧ ಇಂದು ಪ್ರತಿಭಟನೆ ಹಮ್ಮಿಕೊಂಡಿದೆ. ಈಗ ಕೆಲವರು ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿ ಬಗ್ಗೆ ದೂರಿದ್ದಾರೆ. ಭೂಸುಧಾರಣೆ, ಋಣ ಪರಿಹಾರ, ಬ್ಯಾಂಕ್ ರಾಷ್ಟ್ರೀಕರಣ ಇತ್ಯಾದಿ ಜನಪರ ಕೆಲಸ ಮಾಡಿದ್ದ ಇಂಧಿರಾ ಗಾಂಧಿ, ತುರ್ತು ಪರಿಸ್ಥಿತಿಯ ಬಳಿಕವೂ ಮತ್ತೊಮ್ಮೆ ಗೆಲುವನ್ನು ಕಂಡಿದ್ದರು ಎಂದು ಹೇಳಿದರು.

ಮೋದಿ ಸರಕಾರವು ದೇಶವನ್ನು ಅಘೋಷಿತ ತುರ್ತು ಪರಿಸ್ಥಿತಿಗೆ ದೂಡಿದೆ, ಯಾವ ದೇಶಪ್ರೇಮಿಯೂ ಸೇನೆಗೆ ಹೊರ ಗುತ್ತಿಗೆಯನ್ನು ಒಪ್ಪುವುದಿಲ್ಲ. ಬಿಜೆಪಿಯು ಯಾವ ಆಶ್ವಾಸನೆ ಈಡೇರಿಸಿದೆ, ಇವರು ಧರ್ಮ, ಮತ, ಪಾಕ್ ಹೇಳಿಕೊಂಡೇ ರಾಜಕೀಯ ಮಾಡಿದ್ದಾರೆ ಎಂದು ಆರೋಪಿಸಿದರು. ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುವ ನಳಿನ್ ಕುಮಾರ್ ಇನ್ನು ನಳಿನ್ ಹಾಸ್ಯಗಾರ ಇದ್ದ ಹಾಗೆ. ಸೆಂಟ್ರಲ್ ಮೈದಾನ ಬ್ರಿಟಿಷರು ಇಟ್ಟ ಹೆಸರು. ಅದನ್ನು ಸ್ವಾತಂತ್ರ್ಯ ಹೋರಾಟಗಾರರು ನೆಹರು ಮೈದಾನ ಮಾಡಿದರು. ಈಗ ಬಿಜೆಪಿಯವರು ಬ್ರಿಟಿಷರ ಹೆಸರಿಗೆ ವಾಪಾಸು ಹೋಗಿರುವುದು ನಾಚಿಕೆಗೇಡು ಎಂದು ರೈ ವಾಗ್ದಾಳಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಪ್ಪಿ‌, ಶಾಲೆಟ್ ಪಿಂಟೋ, ನವೀನ್ ಡಿಸೋಜಾ, ಹರಿನಾಥ್, ಇಬ್ರಾಹಿಂ ಕೋಡಿಜಾಲ್, ಸಾಹುಲ್ ಹಮೀದ್, ಪಾಲ್ ಮೊದಲಾದವರು ಉಪಸ್ಥಿತರಿದ್ದರು.

Join Whatsapp
Exit mobile version