Home ಟಾಪ್ ಸುದ್ದಿಗಳು ‘ಪಿಎಂ ಕೇರ್ಸ್‌ ಸರ್ಕಾರದ ನಿಧಿಯಲ್ಲ ಎಂದು ಯಾರಾದರೂ ವಾದಿಸಲಾಗುತ್ತದೆಯೇ?’ ದೆಹಲಿ ಹೈಕೋರ್ಟ್‌ನಲ್ಲಿ ದಿವಾನ್ ವಾದಮಂಡನೆ

‘ಪಿಎಂ ಕೇರ್ಸ್‌ ಸರ್ಕಾರದ ನಿಧಿಯಲ್ಲ ಎಂದು ಯಾರಾದರೂ ವಾದಿಸಲಾಗುತ್ತದೆಯೇ?’ ದೆಹಲಿ ಹೈಕೋರ್ಟ್‌ನಲ್ಲಿ ದಿವಾನ್ ವಾದಮಂಡನೆ

ನವದೆಹಲಿ: ಭಾರತ ಸಂವಿಧಾನದ 12ನೇ ವಿಧಿಯಡಿ ಪ್ರಧಾನ ಮಂತ್ರಿ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿಗಳ ನಿಧಿಯನ್ನು (ಪಿಎಂ ಕೇರ್ಸ್‌ ನಿಧಿ) ‘ರಾಷ್ಟ್ರ’ದ ಅಡಿ ಸೇರಿಸುವಂತೆ ( ಭಾರತ ಸರ್ಕಾರದ ನಿಧಿ ಎಂದು ಘೋಷಿಸುವಂತೆ) ಕೋರಿರುವ ಮನವಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ ಬುಧವಾರ ಆರಂಭಿಸಿದೆ. ಪಿಎಂ ಕೇರ್ಸ್‌ ನಿಧಿಯು ರಾಷ್ಟ್ರದ ಅರ್ಥವ್ಯಾಪ್ತಿಯಲ್ಲಿ ಸೇರಿದೆ ಎಂಬುದನ್ನು ಸಾಬೀತುಪಡಿಸುವ ವಿವಿಧ ಮಾನದಂಡಗಳನ್ನು ಅದು ಪೂರೈಸುತ್ತದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಶ್ಯಾಮ್‌ ದಿವಾನ್‌ ವಾದಿಸಿದರು.

ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್‌ ಅವರಿದ್ದ ವಿಭಾಗೀಯ ಪೀಠವು ಮನವಿಯ ವಿಚಾರಣೆ ಆರಂಭಿಸಿತು. ಈ ವೇಳೆ “ಇದು ‘ರಾಷ್ಟ್ರ’ದ ಅರ್ಥವ್ಯಾಪ್ತಿಗೆ (ಭಾರತ ಸರ್ಕಾರಕ್ಕೆ) ಸೇರಿಲ್ಲ ಎಂದು ಯಾರಾದರೂ ವಾದಿಸಲಾಗುತ್ತದೆಯೇ?… ಸ್ವಪ್ರಮಾಣ ಪತ್ರ (ಕೇಂದ್ರ ಸರ್ಕಾರವು ಪಿಎಂ ಕೇರ್ಸ್‌ ನಿಧಿಯು ಭಾರತ ಸರ್ಕಾರದ ನಿಧಿಯಲ್ಲ ಎಂದು ಹೇಳಿರುವುದನ್ನು) ಹೊರತುಪಡಿಸಿ ಪಿಎಂ ಕೇರ್ಸ್‌ ರಾಷ್ಟ್ರಕ್ಕೆ ಸೇರಿಲ್ಲ ಎಂದು ಹೇಳಲು ನಮ್ಮ ಬಳಿ ಯಾವುದೇ ಆಧಾರಗಳು ಇಲ್ಲ. ಪಿಎಂ ಕೇರ್ಸ್‌ ಭಾರತ ಸರ್ಕಾರಕ್ಕೆ ಸೇರಿದೆ ಎಂಬುದರತ್ತವೇ ಎಲ್ಲವೂ ಬೆರಳು ಮಾಡುತ್ತಿವೆ” ಎಂದು ದಿವಾನ್‌ ಹೇಳಿದರು.

ಪಿಎಂ ಕೇರ್ಸ್‌ ರಾಷ್ಟ್ರದ ಅರ್ಥ ವ್ಯಾಪ್ತಿಗೆ ಸೇರಿಲ್ಲದ ನಿಧಿ ಎಂದಾದರೆ ಸರ್ಕಾರದ ಲಾಂಛನ, ಪ್ರಧಾನ ಮಂತ್ರಿಯ ಹೆಸರು ಬಳಕೆ ಇತ್ಯಾದಿಯನ್ನು ಬಳಸಿ ಇದು ಸರ್ಕಾರದ್ದು ಎಂದು ಬಿಂಬಿಸುವುದನ್ನು ನಿಲ್ಲಿಸಬೇಕು ಎಂದು ಅವರು ತಕಾರರು ಎತ್ತಿದರು. ಸೋಮವಾರ ಮಧ್ಯಾಹ್ನ 2.15ಕ್ಕೆ ವಿಚಾರಣೆ ನಿಗದಿಯಾಗಿದ್ದು, ದಿವಾನ್‌ ತಮ್ಮ ವಾದ ಮುಂದುವರಿಸಲಿದ್ದಾರೆ.

ಶ್ಯಾಮ್‌ ದಿವಾನ್‌ ವಾದದ ಪ್ರಮುಖ ಅಂಶಗಳು ಇಂತಿವೆ:
ಸಂವಿಧಾನದ ಹೊರತಾಗಿ ಸರ್ಕಾರವು ಯಾವುದನ್ನೂ ರಚಿಸುವಂತಿಲ್ಲ
ಸಾಂವಿಧಾನಿಕ ಹುದ್ದೆಯಲ್ಲಿರುವವರು ಸಂವಿಧಾನದ ಹೊರತುಪಡಿಸಿ ಏನನ್ನೂ ಸೃಷ್ಟಿಸಲಾಗದು. ಸಾಂವಿಧಾನಿಕ ಹುದ್ದೆಯಲ್ಲಿರುವವರು ಸಾರ್ವಜನಿಕರ ಟ್ರಸ್ಟಿಗಳಾಗಿದ್ದು, ಸಾಂವಿಧಾನಿಕ ಪರಿಶೀಲನೆ ಮೀರಿದ ‘ಖಾಸಗಿ ಎನ್‌ಕ್ಲೇವ್‌’ (ವಿಭಿನ್ನ ಗುಣಲಕ್ಷಣ, ಸ್ವರೂಪ ಹೊಂದಿರುವುದು) ಸೃಷ್ಟಿಸಲಾಗದು ಎಂದು ದಿವಾನ್‌ ಹೇಳಿದ್ದಾರೆ.

‘ರಾಷ್ಟ್ರ’ದ ಭಾಗವಲ್ಲ (ಭಾರತ ಸರ್ಕಾರದ ಭಾಗವಲ್ಲ) ಎಂದು ಪಿಎಂ ಕೇರ್ಸ್‌ ನಿಧಿಯಲ್ಲಿ ಘೋಷಣೆ ಮಾಡಲಾಗಿದೆ. ರಾಷ್ಟ್ರದ ಪರಿವೀಕ್ಷಣೆಗೆ, ಆ ಮೂಲಕ ನ್ಯಾಯಾಂಗದ ಪರಿಶೀಲನೆಗೆ ಒಳಪಡದೆ ಇರಿಸಲು ಅನೇಕ ಆಯ್ಕೆಗಳು ಇವೆಯಾದರೂ, “ಸ್ವಯಂ ಘೋಷಣೆಯನ್ನು ಮಾಡಿಕೊಳ್ಳುವ ಮೂಲಕ ನೀವು ನ್ಯಾಯಾಂಗದ ಪರಿಶೀಲನೆಯಿಂದ ವಿನಾಯತಿ ಪಡೆಯಲು ಸಾಧ್ಯವಿಲ್ಲ” ಎಂದು ನ್ಯಾಯಾಲಯಗಳು ಹೇಳಿವೆ ಎಂದು ದಿವಾನ್‌ ವಾದಿಸಿದರು.

ಪಿಎಂ ಕೇರ್ಸ್‌ ನಿಧಿಯು ರಾಷ್ಟ್ರದ, ಭಾರತ ಸರ್ಕಾರದ ಭಾಗ
ಹೊರ ಜಗತ್ತಿಗೆ ಪಿಎಂ ಕೇರ್ಸ್‌ ನಿಧಿಯು ಸರ್ಕಾರದ್ದಾಗಿದೆ ಎಂದು ಬಿಂಬಿಸಿದ ಮೇಲೆ ಅದು ‘ರಾಷ್ಟ್ರ’ಕ್ಕೆ ಸೇರಿದ್ದಾಗಿದೆ ಎಂದು ದಿವಾನ್‌ ಹೇಳಿದ್ದಾರೆ. ತಮ್ಮ ವಾದವನ್ನು ಸಮರ್ಥಿಸಲು ದಿವಾನ್‌ ಅವರು ನಿಧಿಯು ಭಾರತ ಸರ್ಕಾರಕ್ಕೆ ಸೇರಿದೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ ಎಂದಿದ್ದಾರೆ.

• ಪಿಎಂ ಕೇರ್ಸ್‌ ನಿಧಿಯ ಟ್ರಸ್ಟ್‌ನ ಸದಸ್ಯರುಗಳಲ್ಲಿ ಸರ್ಕಾರಿ ಹುದ್ದೆಯಲ್ಲಿರುವವರೂ ಸೇರಿದ್ದಾರೆ. ಅವರು ಪದನಿಮಿತ್ತ ಸದಸ್ಯರುಗಳಾಗಿದ್ದು, ಅವರ ಸಂಖ್ಯೆ ಅಧಿಕವಾಗಿದೆ. ಸರ್ಕಾರವು ನಿಧಿಯ ಮೇಲೆ ಆಳ ಮತ್ತು ವ್ಯಾಪಕವಾದ ನಿಯಂತ್ರಣ ಹೊಂದಿದೆ ಎಂಬುದನ್ನು ಇದು ಸೂಚಿಸುತ್ತದೆ.

• ಭಾರತದ ಪ್ರಧಾನ ಮಂತ್ರಿ ಟ್ರಸ್ಟ್‌ನ ಮೊದಲಿಗರಾಗಿದ್ದು, ಅವರು ಪದನಿಮಿತ್ತ ಅಧ್ಯಕ್ಷರಾಗಿದ್ದಾರೆ. ಸಾಮಾನ್ಯ ವ್ಯಕ್ತಿಯು ಇದು ಸರ್ಕಾರಿ ನಿಧಿ ಎಂದು ನಂಬಲು ಇಷ್ಟು ಸಾಕು.
• ಸಾರ್ವಜನಿಕ ಉದ್ದೇಶಕ್ಕಾಗಿಯೇ ನಿಧಿ ಸೃಷ್ಟಿಸಲಾಗಿದೆ ಎಂಬುದು ಅದರ ಸ್ವಭಾವದಿಂದ ತಿಳಿಯುತ್ತದೆ. ಇದು ಸರ್ಕಾರದ ಕಾರ್ಯನಿರ್ವಹಣೆಯ ಜೊತೆ ನಿಕಟ ಸಂಪರ್ಕ ಹೊಂದಿದೆ. ಸರ್ಕಾರಿ ಕಾರ್ಯನಿರ್ವಹಣೆಯ ಭಾಗವಾಗಿ ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ₹1 ಕೋಟಿಯನ್ನು ಪಿಎಂ ಕೇರ್ಸ್‌ನಿಂದ ಹಂಚಿಕೆ ಮಾಡಿರುವುದನ್ನು ದಿವಾನ್‌ ನೆನಪಿಸಿದ್ದಾರೆ.
• ಸರ್ಕಾರದ ಲಾಂಛನ ಮತ್ತು gov.in ಡೊಮೈನ್‌ ಬಳಸಲಾಗಿದೆ. ನಿಧಿಯ ವೆಬ್‌ಸೈಟ್‌ ಪ್ರಕಾರ ಪಿಎಂ ಕೇರ್ಸ್‌ ನಿಧಿಯ ಕೃತಿಸ್ವಾಮ್ಯವು ಪ್ರಧಾನ ಮಂತ್ರಿ ಕಚೇರಿಗೆ ಸೇರಿದೆ ಎಂದು ಹೇಳಲಾಗಿದೆ.
• ಪಿಎಂ ಕೇರ್ಸ್‌ ನಿಧಿಯ ಅಧಿಕೃತ ವಿಳಾಸವು ಪ್ರಧಾನಿ ಕಚೇರಿಯಾಗಿದೆ. ಪಿಎಂ ಕೇರ್ಸ್‌ ನಿಧಿಯಿಂದ ಬಳಸಲಾಗುವ ಸೌಲಭ್ಯಗಳಿಗೆ ತೆರಿಗೆ ಪಾವತಿದಾರರ ಹಣದಿಂದ ಹಣಕಾಸು ಒದಗಿಸಲಾಗುತ್ತದೆ. ಭಾರತ ಸರ್ಕಾರಕ್ಕೆ ಒಳಪಡುವ ನಿಧಿಗಳಿಗೆ ಮೀಸಲಾಗಿರುವ ಪ್ರಯೋಜನಗಳು ಮತ್ತು ವಿನಾಯಿತಿಗಳು ಈ ನಿಧಿಗೂ ಸಿಗುತ್ತಿವೆ.
• ಸಾರ್ವಜನಿಕರ ಹಿತಕ್ಕಾಗಿ ಎಂಬ ಆಧಾರದಲ್ಲಿ ಪಿಎಂಒ ಅಧಿಕಾರಿಗಳು ಸಚಿವಾಲಯಕ್ಕೆ ಸಂಬಂಧಿಸಿದ ಬೆಂಬಲ ಮತ್ತು ಸಹಾಯ ನೀಡುತ್ತಿದ್ದಾರೆ.
• ಪಿಎಂ ಕೇರ್ಸ್‌ ನಿಧಿಗೆ ದೇಣಿಗೆ ನೀಡಿದರೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ನಿಧಿಗೆ ನೀಡುವ ದೇಣಿಗೆಯು ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ಖರ್ಚಿನ ಬಾಬ್ತಿಗೆ ಒಳಪಡುತ್ತದೆ. ಇದರ ಪ್ರಕಾರ ಇದು ಕೇಂದ್ರ ಸರ್ಕಾರದ ನಿಧಿ ಎಂಬುದಾಗಿದೆ. ವಿನಾಯಿತಿಗಳನ್ನು 2020ರ ಮಾರ್ಚ್‌ 28ರಂದು ಪಿಐಬಿ ಹೇಳಿಕೆಯಲ್ಲಿ ವಿವರಿಸಲಾಗಿದೆ.

ಸರ್ಕಾರದ ಉನ್ನತಾಧಿಕಾರಿಗಳಿಂದ ಪಿಎಂ ಕೇರ್ಸ್‌ ಸರ್ಕಾರದ ಭಾಗ ಎಂದು ಪರಿಗಣನೆ

ಪಿಎಂ ಕೇರ್ಸ್‌ ನಿಧಿಗೆ ದೇಣಿಗೆ ನೀಡುವಂತೆ ರಾಜ್ಯ ಸಭಾ ಸದಸ್ಯರಿಗೆ ಕಳೆದ ವರ್ಷದ ಮಾರ್ಚ್‌ 29ರಂದು ಉಪರಾಷ್ಟ್ರಪತಿ ಮನವಿ ಮಾಡಿದ್ದನ್ನು ನೆನಪಿಸಿರುವ ದಿವಾನ್‌ ಅವರು ಉಪರಾಷ್ಟ್ರಪತಿ ಪಿಎಂ ಕೇರ್ಸ್‌ ಅನ್ನು ಭಾರತ ಸರ್ಕಾರ ಸೃಷ್ಟಿಸಿದೆ ಎಂದು ಹೇಳಿದ್ದಾರೆ. ಇದೇ ತರಹದ ಮನವಿಯನ್ನು ಕೇಂದ್ರದ ಕಾರ್ಮಿಕ, ರಕ್ಷಣಾ, ಮಾನವ ಸಂಪನ್ಮೂಲ ಇಲಾಖೆಗಳು ಹಾಗೂ ಸಚಿವ ಸಂಪುಟ ಕಾರ್ಯದರ್ಶಿ ಮಾಡಿದ್ದು, ಎಲ್ಲರೂ ಪಿಎಂ ಕೇರ್ಸ್‌ ನಿಧಿಯನ್ನು ಕೇಂದ್ರ ಸರ್ಕಾರ ಸೃಷ್ಟಿಸಿದೆ ಎಂದು ಹೇಳಿದ್ದಾರೆ. ಇದರ ಬಗ್ಗೆ ಯಾರು ತಗಾದೆ ತೆಗೆದಿಲ್ಲ ಎಂದು ದಿವಾನ್‌ ವಾದಿಸಿದ್ದಾರೆ.

ನಿಧಿಯನ್ನು ರಾಜ್ಯ ವರ್ಗಕ್ಕೆ ಸೇರಿಸದಿದ್ದರೆ ತಪ್ಪಾದ ಸಂಪ್ರದಾಯಕ್ಕೆ ನಾಂದಿ

ಪರಿಶೀಲನೆಯಿಂದ ಹೊರತಾದ್ದನ್ನು ಸೃಷ್ಟಿಸುವುದರಿಂದ ಅನಾರೋಗ್ಯಕರ ಪೂರ್ವನಿದರ್ಶನಕ್ಕೆ ನಾಂದಿ ಹಾಡಿದಂತಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ವಿವಾದತ್ಮಕವಾದ ಇಂದಿರಾ ಗಾಂಧಿ ಪ್ರತಿಭಾ ಪ್ರತಿಷ್ಠಾನ್‌ ಟ್ರಸ್ಟ್‌ ಅನ್ನು ದಿವಾನ್‌ ಉಲ್ಲೇಖಿಸಿದರು. “ಸಂವಿಧಾನ ಪಾರದರ್ಶಕತೆ ಬಯಸುತ್ತದೆ… ಇಂದಿರಾ ಗಾಂಧಿ ಪ್ರತಿಭಾ ಪ್ರತಿಷ್ಠಾನದಂತೆ ಇಲ್ಲಿ ‘ಮುಯ್ಯಿಗೆ ಮುಯ್ಯಿ’ ರೀತಿ ಇದೆ ಎಂದೇನೂ ನಾವು ಹೇಳುತ್ತಿಲ್ಲ.. ಮೂಲ ವ್ಯವಸ್ಥೆಯಲ್ಲೇ ಲೋಪ ಇರುವುದರಿಂದ ನಾವು ಅಷ್ಟು ದೂರಕ್ಕೆ ಹೋಗಿಲ್ಲ” ಎಂದು ದಿವಾನ್‌ ವಾದಿಸಿದರು.

ದಾನಿಗಳು ನೀಡಿದ ದೇಣಿಗೆಯ ವಿವರಗಳನ್ನು ನಿಧಿಯು ಬಹಿರಂಗಪಡಿಸುವುದಿಲ್ಲ. ಇದು ಪರಿಶೀಲನೆಯಿಂದ ಹೊರತಾಗಿದೆ ಎಂದು ದಿವಾನ್ ಕಳವಳ ವ್ಯಕ್ತಪಡಿಸಿದ್ದಾರೆ. 1 ಲಕ್ಷ ಅಥವಾ ನ್ಯಾಯಾಲಯ ನಿರ್ಧರಿಸಿದ ದೇಣಿಗೆ ಮೊತ್ತ ನೀಡಿದವರ ವಿವರವನ್ನು ನಿಧಿಯ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಲು ನಿರ್ದೇಶಿಸಬೇಕು ಎಂದು ಅವರು ಕೋರಿದ್ದಾರೆ.


ನಿಧಿಯು ರಾಷ್ಟ್ರದ ವ್ಯಾಪ್ತಿಯಡಿ ಬರುವುದಿಲ್ಲ ಎಂದು ನ್ಯಾಯಾಲಯ ಆದೇಶಿಸಿದರೆ ಇದು ಸರ್ಕಾರದ್ದು ಎಂದು ಬಿಂಬಿಸುವಂತಿಲ್ಲ

ಪಿಎಂ ಕೇರ್ಸ್‌ ನಿಧಿಯು ‘ರಾಷ್ಟ್ರ’ದ ವ್ಯಾಪ್ತಿಯಡಿ ಬರುವುದಿಲ್ಲ ಎಂಬ ತೀರ್ಮಾನಕ್ಕೆ ಒಂದೊಮ್ಮೆ ನ್ಯಾಯಾಲಯ ಬಂದರೆ ಇದು ಭಾರತ ಸರ್ಕಾರದ ಯೋಜನೆ ಎಂದು ನಿಧಿಯನ್ನು ಬಿಂಬಿಸುವಂತಿಲ್ಲ ಎಂಬುದು ಮನವಿಯಲ್ಲಿನ ಮತ್ತೊಂದು ಕೋರಿಕೆಯಾಗಿದೆ ಎಂದು ದಿವಾನ್‌ ಹೇಳಿದ್ದಾರೆ.

ಇದರರ್ಥ ನಿಧಿಯಲ್ಲಿ ಪ್ರಧಾನ ಮಂತ್ರಿ ಪದ ಬಳಕೆ ಅಥವಾ ಸರ್ಕಾರದ ಲಾಂಛನ ಬಳಸುವಂತಿಲ್ಲ. gov.in ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕೃತ ವಿಳಾಸ ಬಳಕೆ ಮಾಡುವಂತಿಲ್ಲ. ಸಚಿವಾಲಯದ ಬೆಂಬಲ ಅಥವಾ ಸರ್ಕಾರಿ ಕಚೇರಿಗಳ ಬೆಂಬಲವನ್ನು ನೀಡುವಂತಿಲ್ಲ ಎಂದು ವಾದಿಸಿದ್ದಾರೆ.


(ಕೃಪೆ: ಬಾರ್ ಆಂಡ್ ಬೆಂಚ್)

Join Whatsapp
Exit mobile version