ಕೊಚ್ಚಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ಯಾತ್ರೆ’ಯ ವಿರುದ್ಧ ಹೈಕೋರ್ಟ್ ವಕೀಲರೋರ್ವರು ಅರ್ಜಿ ಸಲ್ಲಿಸಿದ್ದಾರೆ. ಭಾರತ್ ಜೋಡೋ ಯಾತ್ರೆಯಿಂದಾಗಿ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದು ಆರೋಪಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಭಾರತ್ ಜೋಡೋ ಯಾತ್ರೆ ಸಾಗುವ ಎಲ್ಲಾ ಮಾರ್ಗಗಳಲ್ಲೂ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ರಸ್ತೆಯು ಸಂಪೂರ್ಣವಾಗಿ ರ್ಯಾಲಿಗೆ ಮುಕ್ತವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸಂಚಾರ ದಟ್ಟಣೆ ತಪ್ಪಿಸಲು ಭಾರತ್ ಜೋಡೋ ಯಾತ್ರೆಯನ್ನು ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗಕ್ಕೆ ಸೀಮಿತಗೊಳಿಸಬೇಕು ಮತ್ತು ಇನ್ನೊಂದು ಭಾಗವನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ಭಾರತ್ ಜೊಡೋ ಯಾತ್ರೆಗೆ ಪೊಲೀಸರು ನೀಡಿರುವ ಭದ್ರತೆಗೆ ಹಣ ವಸೂಲಿ ಮಾಡಬೇಕು ಎಂದೂ ಮನವಿಯಲ್ಲಿ ಹೇಳಲಾಗಿದೆ. ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಮತ್ತು ಇತರ ನಾಯಕರನ್ನು ಪ್ರತಿವಾದಿಯನ್ನಾಗಿ ಮಾಡಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ. ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ನಾಳೆ ವಿಚಾರಣೆ ನಡೆಸಲಿದೆ.