Home ಕ್ರೀಡೆ ಮೂಡಿಗೆರೆಯ ನಾಸ್ತುಷ್ ಪ್ರದೀಪ್ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಮೆರಿಕದ ಆಟಗಾರ!

ಮೂಡಿಗೆರೆಯ ನಾಸ್ತುಷ್ ಪ್ರದೀಪ್ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಮೆರಿಕದ ಆಟಗಾರ!

ಅಮೆರಿಕ: ಅಮೆರಿಕ ರಾಷ್ಟ್ರೀಯ ತಂಡದದಲ್ಲಿ ಏಕದಿನ ಮತ್ತು ಟ್ವೆಂಟಿ-20 ಕ್ರಿಕೆಟ್ ಪಂದ್ಯಗಳಲ್ಲಿ ಆಡಿರುವ ಕರ್ನಾಟಕದ ಮೂಡಿಗೆರೆಯ ಪ್ರತಿಭೆ ನಾಸ್ತುಷ್ ಪ್ರದೀಪ್, ಇದೇ ಮೊದಲ ಸಲ ಟಿ 20 ವಿಶ್ವಕಪ್‌ ಟೂರ್ನಿಯ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಜೂನ್‌ 2ರಿಂದ ನಡೆಯಲಿರುವ ಟಿ20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆತಿಥೇಯ ಅಮೆರಿಕ ತಂಡವನ್ನು ನಾಸ್ತುಷ್ ಪ್ರದೀಪ್ ಪ್ರತಿನಿಧಿಸಲಿದ್ದಾರೆ. 

ಮೂಡಿಗೆರೆ ತಾಲ್ಲೂಕಿನ ಕೆಂಜಿಗೆ ಗ್ರಾಮದ ಕಾಫಿ ಬೆಳೆಗಾರ ಹಾಗೂ ಲೇಖಕ ಪ್ರದೀಪ್ ಕೆಂಜಿಗೆ-ಶೃತಕೀರ್ತಿ ದಂಪತಿಯ ಪುತ್ರ ನಾಸ್ತುಷ್‌ ಪ್ರದೀಪ್. ನಾಸ್ತುಷ್‌ ಜನಿಸಿದ್ದು ಅಮೆರಿಕದಲ್ಲಿ. ಪ್ರದೀಪ್ ಕೆಂಜಿಗೆ ದಂಪತಿ ಉದ್ಯೋಗ ನಿಮಿತ್ತ ಹರಿಜೋನಾದಲ್ಲಿ ನೆಲೆಸಿದ್ದರು. ಅಲ್ಲಿ ಜನನವಾದ ಮಗನಿಗೆ ಒಳ್ಳೆಯ ಹೆಸರು ಸೂಚಿಸುವಂತೆ ಅಲ್ಲಿನ ರೆಡ್ ಇಂಡಿಯನ್ಸ್‌ ಬಳಿ ಕೇಳಿದಾಗ ಅವರು ನಾಸ್ತುಷ್ (ಮರುಭೂಮಿಯ ಸಿಂಹ) ಎಂದು ಹೆಸರಿಡಲು ಹೇಳಿದ್ದರಂತೆ. ಅದರಂತೆ ಹೆಸರಿಟ್ಟಿದ್ದಾರೆ. ನಾಸ್ತುಷ್ ಮೂಡಿಗೆರೆ ಮತ್ತು ಬೆಂಗಳೂರಿನ ದಯಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 38 ವಿಕೆಟ್ ಗಳಿಸಿರುವ ನಾಸ್ತುಷ್‌, ಕೆನಡಾ ಎದುರು ನಡೆದ ಸರಣಿಯಲ್ಲಿ ಮೊದಲ ಬಾರಿ ಚುಟುಕು ಕ್ರಿಕೆಟ್ ಕಣಕ್ಕೆ ಇಳಿದಿದ್ದರು. ಆ ಸರಣಿಯಲ್ಲಿ ಒಟ್ಟು 4 ವಿಕೆಟ್ ಉರುಳಿಸಿದ್ದಾರೆ. 21ಕ್ಕೆ 3 ವಿಕೆಟ್ ಅವರ ಶ್ರೇಷ್ಠ ಸಾಧನೆ. ಎಡಗೈ ಸ್ಪಿನ್ನರ್ ಮತ್ತು ಬಲಗೈ ಬ್ಯಾಟರ್ ಆಗಿರುವ ನಾಸ್ತುಷ್‌, 40 ಏಕದಿನ ಮತ್ತು 4 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.

ಟಿ20 ವಿಶ್ವಕಪ್‌ ಟೂರ್ನಿಯ ‘ಎ’ ಗುಂಪಿನಲ್ಲಿರುವ ಅಮೆರಿಕ ಉದ್ಘಾಟನಾ ಪಂದ್ಯದಲ್ಲಿ ಕೆನಡಾವನ್ನು ಎದುರಿಸಲಿದೆ.

Join Whatsapp
Exit mobile version