ಭುವನೇಶ್ವರ : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಸೋಮವಾರ ಒಡಿಶಾ ಬಂದ್ ನಡೆದಿದೆ. ಕಾಂಗ್ರೆಸ್ ಬಂದ್ ಗೆ ಕರೆ ನೀಡಿತ್ತು. ಬಂದ್ ನಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ಬೆಳಗ್ಗೆ 7 ಗಂಟೆಯಿಂದಲೇ ವಾಹನಗಳು ರಸ್ತೆಗೆ ಇಳಿಯಲಿಲ್ಲ. ರೈಲು ಸಂಚಾರದ ಮೇಲೂ ಬಂದ್ ಪರಿಣಾಮ ಬೀರಿದೆ. ಶಾಲಾ, ಕಾಲೇಜುಗಳು ಕೂಡ ಬಂದ್ ಆಗಿವೆ.
ಯಾವುದೇ ಅಹಿತಕರ ಘಟನೆಗಳು ದಾಖಲಾಗಿಲ್ಲ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಕಾರ್ಯಕರ್ಯರು ಭುವನೇಶ್ವರ ಸೇರಿದಂತೆ, ಹಲವು ಕಡೆ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿದರು. ರೈಲು ತಡೆಯೂ ನಡೆಯಿತು. ವಿಮಾನ ಸಂಚಾರದ ಮೇಲೂ ಬಂದ್ ಪರಿಣಾಮ ಬೀರಿತು ಎಂದು ವರದಿಗಳು ತಿಳಿಸಿವೆ.
ನಬರಂಗ್ ಪುರ ಜಿಲ್ಲೆಯಲ್ಲಿ ಪ್ರತಿಭಟನಕಾರರು ಪ್ರಧಾನಿ ಮೋದಿಯವರ ರೀತಿ ವೇಷ ಭೂಷಣ ಧರಿಸಿ, ಪ್ರತಿಭಟನೆಯಲ್ಲಿ ಭಾಗಿಯಾಗಿ, ಎತ್ತಿನ ಬಂಡಿಯಲ್ಲಿ ಪ್ರಯಾಣಿಸುತ್ತಾ ಪೆಟ್ರೋಲ್, ಡೀಸೆಲ್ ಬೆಲೆ ಏನಾದರೂ ಇಳಿಕೆಯಾಗಿದೆಯಾ? ಎಂದು ಪ್ರಶ್ನಿಸಿದರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದ ಪ್ರಧಾನಿ ಮೋದಿಯವರ ಹಳೆಯ ಭಾಷಣಗಳನ್ನು ಮೈಕ್ ನಲ್ಲಿ ಹಾಕಿ, ಮೋದಿ ವೇಷಧಾರಿಯು ಅದಕ್ಕೆ ತಕ್ಕಂತೆ ನಟಿಸುವ ದೃಶ್ಯ ಕಂಡುಬಂತು.