ಲಕ್ನೋ: ಮಹಿಳೆಯೊಬ್ಬರನ್ನು ಸಾಕು ನಾಯಿ ಕಚ್ಚಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಕ್ನೋದ ಕೈಸರ್ ಬಾಗ್ ಪ್ರದೇಶದಲ್ಲಿ ನಡೆದಿದೆ.
ಮೃತ ಮಹಿಳೆ ಸುಶೀಲಾ ತ್ರಿಪಾಠಿ (82) ನಿವೃತ್ತ ಶಿಕ್ಷಕಿಯಾಗಿದ್ದು ಮನೆಯಲ್ಲಿ ಒಬ್ಬಳೇ ಇದ್ದಾಗ ಆಕೆಯ ಸಾಕು ನಾಯಿ ದಾಳಿ ಮಾಡಿದೆ. ತಕ್ಷಣವೇ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದರೂ ಸಾವನ್ನಪ್ಪಿದ್ದಾರೆ.
ಮೃತ ಮಹಿಳೆ ತನ್ನ 25 ವರ್ಷದ ಮಗನೊಂದಿಗೆ ವಾಸಿಸುತ್ತಿದ್ದು , ಪಿಟ್ ಬುಲ್ ಮತ್ತು ಲ್ಯಾಬ್ರಡಾರ್ ಎಂಬ ಎರಡು ಸಾಕು ನಾಯಿಗಳನ್ನು ಹೊಂದಿದ್ದಾರೆ. ಮಗ ಕೆಲಸದ ಮೇಲೆ ಹೊರಗಿದ್ದಾಗ, ನಾಯಿಗಳು ಬೊಗಳುವುದು ಮತ್ತು ಸಾವಿತ್ರಿಯ ಕೂಗು ಕೇಳಿಸಿತು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನೆರೆಯವರು ಮಾಹಿತಿ ನೀಡಿದ ತಕ್ಷಣ ಮಗ ಮನೆಗೆ ಧಾವಿಸಿದ್ದು, ನೆರೆಹೊರೆಯವರ ಸಹಾಯದಿಂದ ತಕ್ಷಣವೇ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದರೂ ಆಕೆಯ ಕುತ್ತಿಗೆಯಿಂದ ಕಿಬ್ಬೊಟ್ಟೆ ಮತ್ತು ಕಾಲುಗಳವರೆಗೆ ಅನೇಕ ಆಳವಾದ ಗಾಯಗಳಾಗಿದ್ದು ಅತಿಯಾದ ರಕ್ತ ಸ್ರಾವದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.