Home ಟಾಪ್ ಸುದ್ದಿಗಳು ಚುನಾವಣೆಗೆ ದುಡ್ಡು ಮಾಡಲು ನಿಗಮ-ಮಂಡಳಿ ಅಧ್ಯಕ್ಷ ಹುದ್ದೆ ಮಾರಾಟ: ಎಎಪಿ

ಚುನಾವಣೆಗೆ ದುಡ್ಡು ಮಾಡಲು ನಿಗಮ-ಮಂಡಳಿ ಅಧ್ಯಕ್ಷ ಹುದ್ದೆ ಮಾರಾಟ: ಎಎಪಿ

ಬೆಂಗಳೂರು: ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷ ಹುದ್ದೆಗಳನ್ನು ಬಿಜೆಪಿಯು ಹಣ ಪಡೆದು ಹಂಚುತ್ತಿದ್ದು, ಈ ಮೂಲಕ ಮುಂದಿನ ಚುನಾವಣೆಯಲ್ಲಿ ಅಕ್ರಮ ಎಸಗಲು ಭಾರೀ ಹಣ ಸಂಗ್ರಹಿಸುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, “ರಾಜ್ಯ ಸರ್ಕಾರವು ಸುಮಾರು 52 ನಿಗಮ, ಮಂಡಳಿಗಳ ಅಧ್ಯಕ್ಷರನ್ನು ವಜಾ ಮಾಡಿರುವುದರ ಹಿಂದೆ ಭಾರೀ ಅಕ್ರಮ ಅಡಗಿದೆ. ಬಿಜೆಪಿಯ 40% ಸರ್ಕಾರವು ಇದರಲ್ಲೂ ದುಡ್ಡು ಹೊಡೆಯುತ್ತಿದ್ದು, ಹೆಚ್ಚು ಹಣ ನೀಡಿದವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಹಂಚಿಕೆ ಮಾಡುತ್ತಿದೆ. ಮುಂಬರುವ ಬಿಬಿಎಂಪಿ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಅಕ್ರಮ ಎಸಗಲು ಬಿಜೆಪಿಯು ಹಲವು ಮಾರ್ಗಗಳಿಂದ ಹಣ ಸಂಗ್ರಹಿಸುತ್ತಿದ್ದು, ಇದು ಕೂಡ ಆ ಯೋಜನೆಯ ಭಾಗವಾಗಿದೆ” ಎಂದು ಹೇಳಿದರು.

“ಬಿಜೆಪಿ ಸರ್ಕಾರವು ಬ್ರಹ್ಮಾಂಡ ಭ್ರಷ್ಟಾಚಾರ ಎಸಗುವವರನ್ನು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳಲ್ಲೇ ಉಳಿಸಿಕೊಂಡಿದೆ. ರುದ್ರೇಶ್ ಅಧ್ಯಕ್ಷತೆಯ ಕೆಆರ್ ಐಡಿಎಲ್ ನಲ್ಲಿ ಅವ್ಯಾಹತವಾಗಿ ಅಕ್ರಮ ನಡೆಯುತ್ತಿದೆ. ಕೆಎಸ್ ಆರ್ ಟಿಸಿ ಅಧ್ಯಕ್ಷ ಚಂದ್ರಪ್ಪರವರು ನಿಗಮವನ್ನು ಹಳ್ಳ ಹಿಡಿಸಿದ್ದಾರೆ. ಕೆಎಸ್ ಆರ್ ಟಿಸಿಯ ಬಹುತೇಕ ಬಸ್‌ಗಳು ಡಿಪೋದಲ್ಲೇ ನಿಂತಿರುವುದು ಇದಕ್ಕೆ ನಿದರ್ಶನ. ಕೆಎಸ್‌ಟಿಡಿಸಿ ನಿರ್ವಹಣೆಯಲ್ಲಿ ಕಾಪು ಸಿದ್ದಲಿಂಗಸ್ವಾಮಿ ಸಂಪೂರ್ಣ ವಿಫಲರಾಗಿದ್ದಾರೆ. ಇವರೆಲ್ಲರನ್ನು ವಜಾ ಮಾಡದೇ ಉಳಿಸಿಕೊಂಡಿರುವುದು ಖಂಡನೀಯ” ಎಂದು ಜಗದೀಶ್ ವಿ ಸದಂ ಹೇಳಿದರು.

Join Whatsapp
Exit mobile version