ಇಂಫಾಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಮಣಿಪುರ ಸರ್ಕಾರ ಅನುಮತಿ ನೀಡಿದೆ. ಭಾಗವಹಿಸುವವರ ಸಂಖ್ಯೆಯನ್ನು ಸೀಮಿತಗೊಳಿಸಿದೆ.
ಇಂಫಾಲ್‌ನ ಹಪ್ತಾ ಕಾಂಗ್ಜೆಬಂಗ್ ಮೈದಾನದಿಂದ ಯಾತ್ರೆ ಆರಂಭಿಸಲು ಅನುಮತಿ ನೀಡುವಂತೆ ಕಾಂಗ್ರೆಸ್ ಮನವಿ ಮಾಡಿತ್ತು. ಅನುಮತಿ ನಿರಾಕರಿಸಲಾಗಿತ್ತು. ವಾರದ ಬಳಿಕ ಅನುಮತಿ ದೊರೆತಿದೆ.
ಇಂಫಾಲ್ ಪೂರ್ವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಹೊರಡಿಸಿದ ಆದೇಶದಲ್ಲಿ, ಯಾವುದೇ ಅಹಿತಕರ ಘಟನೆ ಮತ್ತು ಕಾನೂನು, ಸುವ್ಯವಸ್ಥೆಗೆ ಧಕ್ಕೆಯಾಗದಂತೆ ತಡೆಯಲು ಜನವರಿ 14 ರಂದು ಸೀಮಿತ ಸಂಖ್ಯೆಯಲ್ಲಿ ಯಾತ್ರೆ ನಡೆಸಲು ಅನುಮತಿಸಲಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಭಾಗವಹಿಸುವವರ ಸಂಖ್ಯೆ ಮತ್ತು ಹೆಸರನ್ನು ಈ ಕಛೇರಿಗೆ ಮುಂಚಿತವಾಗಿ ಒದಗಿಸಬೇಕು ಎಂದು ಹೇಳಿದೆ. ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಸೆಕ್ಷನ್ 144 ಸಿಆರ್ ಪಿಸಿ ಅಡಿಯಲ್ಲಿ ನಿಷೇಧ ಜಾರಿಯಲ್ಲಿರಲಿದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಜನವರಿ 14 ರಂದು ಪ್ರಾರಂಭವಾಗಲಿರುವ ಈ ಯಾತ್ರೆಯು 6,713 ಕಿಲೋಮೀಟರ್ ದೂರ ಕ್ರಮಿಸಲಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿತ್ತು.