ಲಖನೌ: ಚಳಿ ಕಾಯಿಸಲೆಂದು ಹಾಕಿದ್ದ ಬೆಂಕಿಯಿಂದ ಉಸಿರುಗಟ್ಟಿ ಒಂದೇ ಕುಟುಂಬದ ಐದು ಮಕ್ಕಳು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.
ರಹೀಝುದ್ದೀನ್ ಎಂಬವರಿಗೆ ಸೇರಿದ ಮನೆಯಲ್ಲಿ ಘಟನೆ ನಡೆದಿದ್ದು, ರಹೀಝುದ್ದೀನ್ ಅವರ ಮೂವರು ಮಕ್ಕಳು ಮತ್ತು ಅವರ ಸಂಬಂಧಿಕರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಪತ್ನಿ ಹಾಗೂ ಸಹೋದರನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ರಾತ್ರಿ ಕುಟುಂಬದ ಏಳು ಮಂದಿ ಮಲಗಲು ಹೋಗಿದ್ದು, ಮರುದಿನ ಸಂಜೆಯಾದರೂ ಬಾಗಿಲು ತೆರೆಯದೇ ಇದ್ದಾಗ ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬಂದಿತ್ತು. ಬಾಗಿಲು ಮುರಿದು ಪರಿಶೀಲಿಸಿದಾಗ ದಾರುಣ ಘಟನೆ ಬೆಳಕಿಗೆ ಬಂದಿದೆ.
ಮನೆಯೊಳಗೆ ಹೊಗೆ ದಟ್ಟವಾಗಿ ತುಂಬಿತ್ತು, ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಇಂಗಾಲದ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಹಾನಿಕಾರಕ ಅನಿಲಗಳು ಕೊಠಡಿಯಲ್ಲಿರುವಾಗ ಕೋಣೆಯ ಬಾಗಿಲು ಹಾಕಿದರೆ ಅದು ಉಸಿರುಗಟ್ಟುವಕೆಗೆ ಕಾರಣವಾಗಬಹುದು, ದೀರ್ಘಕಾಲ ಅದನ್ನು ಉಸಿರಾಡುವುದರಿಂದ ಸಾವು ಸಂಭವಿಸಬಹುದು. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಸಿಂಗ್ ತಿಳಿಸಿದ್ದಾರೆ.