ಬೆಂಗಳೂರು: ವೇಗವಾಗಿ ಬಂದ ಕಾರೊಂದು ಯದ್ವಾತದ್ವ ಚಲಿಸಿ ನಾಲ್ವರು ಪಾದಚಾರಿಗಳು, ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು ಮೂವರು ಗಾಯಗೊಂಡಿರುವ ದುರ್ಘಟನೆ ಶುಕ್ರವಾರ ಬೆಳಿಗ್ಗೆ ಬನಶಂಕರಿಯ ಇಟ್ಟಮಡು ಜಂಕ್ಷನ್ ಬಳಿ ನಡೆದಿದೆ.
ಶಿವಮೊಗ್ಗ ಮೂಲದ ನಗರದ ಕೇಟರಿಂಗ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ (28) ಮೃತಪಟ್ಟವರು. ಗಾಯಗೊಂಡ ಸಚಿನ್, ಶಿವರಾಜು, ಹಾಗೂ ಶೈಲೇಂದ್ರ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕತ್ರಿಗುಪ್ಪೆ ಜಂಕ್ಷನ್ ಕಡೆಯಿಂದ ಇಟ್ಟಮಡು ಜಂಕ್ಷನ್ ಕಡೆಗೆ ಬೆಳಿಗ್ಗೆ 7.29ರ ವೇಳೆ ಕಾರು ವೇಗವಾಗಿ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದ ಚಾಲಕ ಮುಕೇಶ್ ಉದ್ಭವ ಆಸ್ಪತ್ರೆ ಬಳಿ ಚಂದನ್ ಮೋಟಾರ್ ದ್ವಿಚಕ್ರ ವಾಹನ ಷೋರೂಂ ಬಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಚಿನ್, ಶಿವರಾಜು, ಸುರೇಶ್ ಮತ್ತು ಶೈಲೇಂದ್ರ ಸೇರಿ ನಾಲ್ವರಿಗೆ ಗುದ್ದಿದ್ದಾನೆ.
ಬಳಿಕ ಒಂದು ಕಾರು ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿಮಾಡಿದ್ದು, ವಾಹನಗಳು ಜಂಖಗೊಂಡಿವೆ.
ಗಾಯಗೊಂಡ ಸುರೇಶ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ವಾಸವಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪ್ರಕರಣ ದಾಖಲಿಸಿದ ಬನಶಂಕರಿ ಸಂಚಾರ ಪೊಲೀಸರು ಕಾರು ಚಾಲಕನನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.