ಮುಂಬೈ: ಅತಿಯಾದ ಪ್ರಯಾಣಿಕರ ದಟ್ಟಣೆಗೆ ಸಿಲುಕಿದ್ದ ದೆಹಲಿ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಗದ್ದಲ ಗಲಾಟೆ ಉಂಟಾಗಿತ್ತು. ಇದೀಗ ಈ ಸರದಿ ಮುಂಬಯಿ ವಿಮಾನ ನಿಲ್ದಾಣದ್ದು. ಇಲ್ಲಿಯೂ ಇಂತಹ ಗೊಂದಲಕ್ಕೆ ಸಿಲುಕಿ ತಡೆಗೋಡೆಗಳನ್ನು ದೂಡಿ ಹಾಕಿದ ಗದ್ದಲದ ಪ್ರಸಂಗದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಬ್ಯಾಗೇಜ್ ಚೆಕಿಂಗ್ ಭದ್ರತಾ ವಲಯದಲ್ಲಿ ಈ ಎಳೆದಾಟ, ನೂಕಾಟ ನಡೆದಿದೆ. ಒಮ್ಮೆಗೇ ಅತಿಯಾದ ಜನದಟ್ಟಣೆ ಉಂಟಾದುದರಿಂದ ಸಿಐಎಸ್’ಎಫ್- ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯವರು ಜನರನ್ನು ಹತೋಟಿಗೆ ತರಲು ಒದ್ದಾಡಿದ್ದು ಕಂಡು ಬಂದಿದೆ.
ಬೀನು ವರ್ಗೀಸ್ ಎನ್ನುವ ಸಾಮಾಜಿಕ ಕಾರ್ಯಕರ್ತೆ ಈ ತಳ್ಳಾಟದ ವೀಡಿಯೋವನ್ನು ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತಿ ಉದ್ದನೆಯ ಸರತಿಯ ಸಾಲಿನಲ್ಲಿ ಪ್ರಯಾಣಿಕರು ಹತಾಶರಾಗಿ ನಿಂತಿರುವುದೂ ಕಂಡು ಬಂದಿದೆ.
ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಉಂಟಾದ ಪ್ರಯಾಣಿಕರ ಪಡಿಪಾಟಲಿನ ರೀತಿಯಲ್ಲೇ ಇಲ್ಲಿಯೂ ನಡೆದಿರುವುದು ವೀಡಿಯೋದಿಂದ ತಿಳಿದು ಬಂದಿದೆ. ಆಗ ಜನರಿಂದ ನೂರಾರು ದೂರುಗಳು ಸಚಿವಾಲಯಕ್ಕೆ ಹೋದುದರಿಂದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಪರಿಸ್ಥಿತಿ ಪರಿಶೀಲನೆಗೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದರು.
ಬೀನು ಅವರು ವೀಡಿಯೋ ಹಂಚಿಕೊಂಡು “ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್’ನಲ್ಲಿ ಭಾರೀ ಪ್ರಯಾಣಿಕರ ದಟ್ಟಣೆ ಕಂಡು ಬಂದಿದೆ. ಇದು ಮುಂಜಾವ 5 ಗಂಟೆಯ ಸ್ಥಿತಿ. ನಿಮ್ಮ ಪ್ರಯಾಣ ಕಾಲವನ್ನು ಸರಿಯಾಗಿ ಯೋಜಿಸಿಕೊಳ್ಳಿ” ಎಂದು ಅವರು ಬರೆದಿದ್ದಾರೆ.
ಹಲವರು ಈ ವೀಡಿಯೋವನ್ನು ಹಂಚಿಕೊಂಡು ವಿಮಾನ ನಿಲ್ದಾಣದ ನಿರ್ವಾಹಕರ ವೈಫಲ್ಯವನ್ನು, ತಪ್ಪು ನಡೆಯನ್ನು ಖಂಡಿಸಿದ್ದಾರೆ.
ಟ್ವಿಟರ್ ಬಳಕೆದಾರರೊಬ್ಬರು ವಿಮಾನ ನಿಲ್ದಾಣದ ಫೋಟೋ ಹಂಚಿಕೊಂಡು “ಮುಂಬೈ ರಸ್ತೆ ಮತ್ತು ರೈಲು ನಿಲ್ದಾಣಗಳಲ್ಲಿ ಈ ದೃಶ್ಯ ಮಾಮೂಲು. ಮುಂದೆ ಏನಾದೀತು ನೀವೇ ಊಹಿಸಿಕೊಳ್ಳಿ. ವಿಮಾನದ ನಿಲ್ದಾಣದ ಬಾಗಿಲುಗಳಲ್ಲೂ ಸರತಿಯ ವ್ಯವಸ್ಥೆ ಕ್ರಮ ಪ್ರಕಾರ ಇಲ್ಲದಿರುವುದು ಈ ಗದ್ದಲಕ್ಕೆ ಕಾರಣ. ಜವಾಬ್ದಾರಿ ಹೊತ್ತವರ ಬದಲಾವಣೆ ಕಾರಣವಾದರೆ ಅವರನ್ನು ಬದಲಿಸಬೇಕಷ್ಟೆ!” ಎಂದು ಬರೆದಿದ್ದಾರೆ.
“ಮುಂಬೈ ವಿಮಾನ ನಿಲ್ದಾಣವು ದಿಲ್ಲಿಯ ಅವ್ಯವಸ್ಥೆಯನ್ನು ಪ್ರತಿಫಲಿಸಿದೆ. ಲಗೇಜು ಕೊಡಲು-ಪಡೆಯಲು ಇಡೀ ದಿನ ಕಳೆಯಬೇಕಾಗಿದೆ” ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
“ದೇಶೀಯ ವಿಮಾನ ನಿಲ್ದಾಣಗಳಲ್ಲಿ ಭಾರೀ ಪ್ರಯಾಣಿಕರ ಪ್ರಯಾಸ ಆರಂಭವಾಗಿರುವುದರಿಂದ ನಿಮ್ಮ ಪ್ರಯಾಣಕ್ಕೆ ಹೆಚ್ಚಿನ ಸಮಯವನ್ನು ಗೊತ್ತುಪಡಿಸಿಕೊಳ್ಳಿರಿ” ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.