Home ಟಾಪ್ ಸುದ್ದಿಗಳು ಪರೇಶ್ ಮೇಸ್ತಾ ಸಾವು ಪ್ರಕರಣ: ಮುಸ್ಲಿಮರಲ್ಲಿ ಕ್ಷಮೆ ಯಾಚಿಸುವಂತೆ ಎಸ್ ಡಿಪಿಐ ಆಗ್ರಹ

ಪರೇಶ್ ಮೇಸ್ತಾ ಸಾವು ಪ್ರಕರಣ: ಮುಸ್ಲಿಮರಲ್ಲಿ ಕ್ಷಮೆ ಯಾಚಿಸುವಂತೆ ಎಸ್ ಡಿಪಿಐ ಆಗ್ರಹ

ಬೆಂಗಳೂರು: ಪರೇಶ್ ಮೇಸ್ತ ಸಾವು ಆಕಸ್ಮಿಕ ಎಂದು ಸಿಬಿಐ ಹೇಳಿದೆ. ಅದನ್ನು ಮುಸ್ಲಿಮರು ಮಾಡಿದ ಕೊಲೆ ಎಂದು ಬಿಂಬಿಸಿ,  ರಾಜ್ಯಕ್ಕೆ ಬೆಂಕಿ ಹಚ್ಚಿ, ಪೊಲೀಸರ ವಾಹನಗಳನ್ನು ದಹಿಸಿದ್ದ ಮಾನಗೆಟ್ಟ ಬಿಜೆಪಿ ರಾಜೀನಾಮೆ ಕೊಟ್ಟು ತೊಲಗಲಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ ಡಿಪಿಐ) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು  ಹೇಳಿದ್ದಾರೆ.

ಎಲ್ಲೇ ಒಂದು ಸಾವಾದರೂ ಸಾಮಾನ್ಯವಾಗಿ ಮರುಕ, ಕರುಣೆ ಹುಟ್ಟುತ್ತದೆ. ಆದರೆ ರಣಹದ್ದಿನ ಹಾಗೆ ಹೆಣಗಳಿಗೆ ಕಾಯುವ ಫ್ಯಾಶಿಸ್ಟ್ ಬಿಜೆಪಿಗೆ ಮಾತ್ರ ಅದು ಒಂದು ರಾಜಕೀಯ ಅವಕಾಶವಾಗಿ ಬಳಸಿಕೊಳ್ಳುತ್ತದೆ. 2017ರಲ್ಲಿ ಪರೇಶ್ ಮೇಸ್ತ ಎನ್ನುವ ಯುವಕ ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಸಾಯುತ್ತಾನೆ. ಹಿಂದೂ ಒಬ್ಬನ ಹೆಣ ಕಂಡ ತಕ್ಷಣ ಅದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ನರಿ ಬುದ್ಧಿಯ ಬಿಜೆಪಿ ಕಣಕ್ಕೆ ಇಳಿಯಿತು. ಇದೊಂದು ಕೊಲೆ, ಇದನ್ನು ಮುಸ್ಲಿಮರೇ ಮಾಡಿದ್ದಾರೆ ಎಂದು ಆರೋಪಿಸಿ ಕೊಲೆಯ ಜೊತೆಗೆ ಎಸ್‌ ಡಿಪಿಐ ಪಕ್ಷ ಮತ್ತು ಪಿ.ಎಫ್.ಐ ಸಂಘಟನೆಯ ಹೆಸರನ್ನು ಎಳೆದು ತಂದಿತು. ಒಂದಷ್ಟು ಮುಸ್ಲಿಮರು ಜೈಲಿಗೆ ಹೋಗುವಂತೆ ಮಾಡಿತು. ಆ ವಿಚಾರವಾಗಿ ದೊಡ್ಡ ಮಟ್ಟದ ಕೋಮು ಗಲಭೆ ಮಾಡಿಸಿತ್ತು.

ಬಿಜೆಪಿಯ ಎಲ್ಲ ನಾಯಕರು ಒಟ್ಟಿಗೆ ಸೇರಿ ಯೋಜನೆ ರೂಪಿಸಿ ಮುಸ್ಲಿಮರ ವಿರುದ್ಧ ಕೋಮು ದ್ವೇಷದ ಭಾಷಣಗಳನ್ನು ಮಾಡಿ ಇಡೀ ರಾಜ್ಯದಲ್ಲಿ ಗಲಭೆಗೆ ಪ್ರಚೋದನೆ ನೀಡಿದರು. ಕರ್ನಾಟಕ ಹೊತ್ತಿ ಉರಿಯಿತು. ಪೊಲೀಸರ ವಾಹನಗಳಿಗೂ ಕೂಡ ಬೆಂಕಿ ಹಚ್ಚಲಾಯಿತು. ಅದರಲ್ಲಿ ಐಜಿಪಿ ಕಾರನ್ನೂ ಸುಟ್ಟು ಇನ್ನಿಲ್ಲದಂತಹ ಹಿಂಸಾಚಾರವನ್ನು ಫ್ಯಾಶಿಸ್ಟ್ ಬಿಜೆಪಿ ಮಾಡಿತು. 2018ರ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಲಾಭಕ್ಕೆ ಗಲಭೆ ಚಾಣಾಕ್ಷ ಗೃಹಮಂತ್ರಿ ಅಮಿತ್ ಷಾರನ್ನು ಕೂಡ ಕರೆಸಿ, ಈ ವಿಚಾರವಾಗಿ ಜನರ ಭಾವನೆಗಳನ್ನು ಕೆರಳಿಸಿತು. ಈಗ ಅದೇ ಬಿಜೆಪಿ ಸರ್ಕಾರದ ಅಡಿಯಲ್ಲಿ ಬರುವ ಸಿಬಿಐ ತನಿಖಾ ಸಂಸ್ಥೆ ಅದೊಂದು ಆಕಸ್ಮಿಕ ಸಾವು ಎಂದು ಅಂತಿಮ ವರದಿಯನ್ನು ನೀಡಿದೆ. ಆ ಪಕ್ಷಕ್ಕೆ ಮಾನ ಮರ್ಯಾದೆ ಇದ್ದರೆ ಈಗ ಜನರ ನಡುವೆ ಬಂದು ಆ ಹಿಂಸಾಚಾರಕ್ಕೆ ಉತ್ತರ ಕೊಡಲಿ ಎಂದು ಮಜೀದ್ ಆಗ್ರಹಿಸಿದ್ದಾರೆ.

ಕೋಮುವಾದಿ ಬಿಜೆಪಿ ಪಕ್ಷ ಹಿಂದೂ ಮುಸ್ಲಿಂ ದ್ವೇಷವನ್ನೇ ಬಂಡವಾಳ ಮಾಡಿಕೊಂಡು ಅಧಿಕಾರದ ಕುರ್ಚಿಗೆ ಏರುವ ತವಕದಲ್ಲಿರುತ್ತದೆ ಎನ್ನುವುದಕ್ಕೆ ಇದು ಒಂದು ಉದಾಹರಣೆ ಅಷ್ಟೇ. ಇಂತಹ ನೀಚ ಮನಸ್ಥಿತಿಯ, ದೇಶದ್ರೋಹಿ ಸಂಚುಗಳನ್ನು ರೂಪಿಸುವ ಬಿಜೆಪಿ ಸರ್ಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ ಎನ್ನುವುದು ಲವಲೇಶವಾದರೂ ಉಳಿದಿದ್ದರೆ ಮತ್ತು ಅವರೇ ಹೇಳುವ ಧಮ್ಮು, ತಾಕತ್ತು ಇದ್ದರೆ ವಿಧಾನಸಭೆಯನ್ನು ವಿಸರ್ಜಿಸಿ ಜನರ ಮುಂದೆ ಬಂದು ಮತ ಯಾಚಿಸಲಿ ಎಂದು ಮಜೀದ್ ಅವರು ಸವಾಲು ಹಾಕಿದ್ದಾರೆ.

ಇನ್ನು ಕಾಂಗ್ರೆಸ್ ನವರು ಪಿ.ಎಫ್ ಐ ಸಂಘಟನೆ ಬ್ಯಾನ್ ಆಗಬೇಕು ಎಂದು ಬೇಡಿಕೆ ಇಟ್ಟು, ಅದು ಬ್ಯಾನ್ ಆದಾಗ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅದನ್ನು ಸ್ವಾಗತಿಸಿದರು. ಆದರೆ ಮೇಸ್ತ ಸಾವಿನ ಸಂದರ್ಭದಲ್ಲಿ ಅಷ್ಟೆಲ್ಲ ಗಲಭೆಗಳಾಗಿ ಗಲಭೆಕೋರರು ಐಜಿಪಿ ಕಾರನ್ನೇ ಸುಟ್ಟರೂ ಅಂದು ಮುಖ್ಯಮಂತ್ರಿಯಾಗಿದ್ದ ಇದೇ ಸಿದ್ದರಾಮಯ್ಯ ಆಗಲಿ, ಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಆಗಲಿ ಯಾಕೆ ಈ ಗುಂಡಾಗಳ ವಿರುದ್ಧ ಯು.ಎ.ಪಿ.ಎ ಹಾಕಲಿಲ್ಲ? ಇದರ ಆರ್ಥ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸಹ ಮುಸ್ಲಿಮರನ್ನು ಬಲಿಕೊಟ್ಟು ತಮ್ಮ ರಾಜಕೀಯ ಲಾಭ ಪಡೆಯುತ್ತಾರೆ ಎಂಬುದೇ ಆಗಿರುತ್ತದೆ.  ರಾಜ್ಯದ ಜನ ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿ ಮುಂದಿನ ಚುನಾವಣೆಯಲ್ಲಿ ಈ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಮಜೀದ್ ಅವರು ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.

Join Whatsapp
Exit mobile version