ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಸ್ಥಳೀಯ ಕುದುರೆ ರೈಡರ್ ಒಬ್ಬರು ಬಲಿಯಾಗಿದ್ದಾರೆ.
ಸೈಯದ್ ಆದಿಲ್ ಹುಸೇನ್ ಶಾ ಮೃತಪಟ್ಟ ವ್ಯಕ್ತಿ. ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸುತ್ತಿದ್ದಾಗ ಸೈಯದ್ ಧೈರ್ಯ ಮಾಡಿ ಓರ್ವನ ಉಗ್ರನಿಂದ ರೈಫಲ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸೈಯದ್ ಮೇಲೆ ಗುಂಡು ಹಾರಿಸಿದ್ದಾರೆ.
ಸೈಯದ್ ಆದಿಲ್ ಪಹಲ್ಗಾಮ್ ಕಾರು ಪಾರ್ಕಿಂಗ್ ಸ್ಥಳದಿಂದ ಕುದುರೆಯ ಮೇಲೆ ಪ್ರವಾಸಿಗರನ್ನು ಬೈಸರನ್ ಗೆ ಕರೆದುಕೊಂಡು ಬರುವ ಕೆಲಸ ಮಾಡುತ್ತಿದ್ದರು. ಭೀಕರ ದಾಳಿಯಲ್ಲಿ ಸೈಯದ್ ಜೊತೆ 25 ಪುರುಷ ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಿದ್ದಾರೆ.
ಕುಟುಂಬದ ಏಕೈಕ ಜೀವನಾಧಾರ ಸೈಯದ್ ಆಗಿದ್ದರು. ಇವರು ವೃದ್ಧ ಪೋಷಕರು, ಹೆಂಡತಿ ಮತ್ತು ಮಕ್ಕಳನ್ನು ಅಗಲಿದ್ದಾರೆ.
ಸೈಯದ್ ತಂದೆ ಹೈದರ್ ಸುದ್ದಿ ಸಂಸ್ಥೆಯ ಜೊತೆ ಮಾತನಾಡಿ, ನನ್ನ ಮಗ ನಿನ್ನೆ ಕೆಲಸಕ್ಕೆಂದು ಪಹಲ್ಗಾಮ್ ಗೆ ಹೋಗಿದ್ದ ಮಧ್ಯಾಹ್ನ 3 ಗಂಟೆ ಸುಮಾರಿಗೆ ದಾಳಿಯ ಬಗ್ಗೆ ನಮಗೆ ತಿಳಿಯಿತು. ನಾವು ಅವನಿಗೆ ಕರೆ ಮಾಡಿದೆವು, ಆದರೆ ಅವನ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಸಂಜೆ 4:40ಕ್ಕೆ ಅವನ ಫೋನ್ ಆನ್ ಆಯ್ತು. ಆದರೆ ಯಾರೂ ಉತ್ತರಿಸಲಿಲ್ಲ. ನಾವು ಪೊಲೀಸ್ ಠಾಣೆಗೆ ಧಾವಿಸಿದೆವು. ಆಗ ಮೃತಪಟ್ಟಿರುವುದು ಗೊತ್ತಾಯಿತು ಎಂದು ತಿಳಿಸಿದರು.
ಮಿನಿ ಸ್ವಿಟ್ಜರ್ ಲ್ಯಾಂಡ್ ಎಂದೇ ಖ್ಯಾತಿಗಳಿಸಿರುವ ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ಅಟ್ಟಹಾಸಕ್ಕೆ ಕನ್ನಡಿಗರು ಸೇರಿದಂತೆ 28 ಪ್ರವಾಸಿಗರು ಮೃತಪಟ್ಟಿರುವ ನಡೆಸಿರುವ ಘಟನೆಗೆ ದೇಶವೇ ಬೆಚ್ಚಿ ಬಿದ್ದಿದೆ.
ಮೃತಪಟ್ಟವರಲ್ಲಿ ಒಬ್ಬರು ಯುಎಇ ಮತ್ತು ನೇಪಾಳ ಹಾಗೂ ಇಬ್ಬರು ಸ್ಥಳೀಯರು ಸೇರಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.