ಮಂಗಳೂರು: ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ದಾಳಿಯಲ್ಲಿ ಗುಪ್ತಚರ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಎಸ್ ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೆ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ದಾಳಿಯು ದೇಶದ ಜನತೆ ಜಗತ್ತಿನ ಮುಂದೆ ತಲೆ ತಗ್ಗಿಸುವಂತ ಹೇಯ ಕೃತ್ಯವಾಗಿದ್ದು, ಎಸ್ ಡಿಪಿಐ ಮಂಗಳೂರು ನಗರ ಜಿಲ್ಲಾ ಸಮಿತಿಯು ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ ಹಾಗೂ ದಾಳಿಯಲ್ಲಿ ಮಡಿದವರಿಗೆ ಸಂತಾಪವನ್ನು ಸೂಚಿಸುತ್ತದೆ ಎಂದರು.
ಈ ಘಟನೆಯು ಪುಲ್ವಾಮ ದಾಳಿಯ ನಂತರದ ಎರಡನೇ ಅತೀ ದೊಡ್ಡ ಘಟನೆಯಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ಶೀಘ್ರವೇ ಇದರ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಹಚ್ಚಬೇಕೆಂದು ಪಕ್ಷವು ಕೇಂದ್ರ ಸರಕಾರವನ್ನು ಆಗ್ರಹಿಸುತ್ತದೆ.
ಪಹಲ್ಗಾಮ್ ದಾಳಿಯಲ್ಲಿ ಮಡಿದವರ ದುಖದಲ್ಲಿ ಎಸ್ ಡಿ ಪಿ ಐ ಭಾಗಿಯಾಗುತ್ತಿದೆ. ಈ ಹೇಯ ಕೃತ್ಯದ ಹಿಂದಿರುವ ಅಪರಾಧಿಗಳನ್ನು ಗುರುತಿಸಿ ಅವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಮುಂದೆ ಇಂತಹ ಮನುಷ್ಯತ್ವ ವಿರೋಧಿ ಘಟನೆಗಳು ನಡೆಯದಂತೆ ತಡೆಯುವಂತಾಗಬೇಕು ಆಗ್ರಹಿಸಿದ್ದಾರೆ.