ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಸರ್ಕಾರ, ಪಾಕಿಸ್ತಾನದ ವಿರುದ್ಧ ಕೆಲವಾರು ನಿರ್ಬಂಧಗಳನ್ನು ಹೇರಿ ಬಿಸಿ ಮುಟ್ಟಿಸಿದೆ. ಅಷ್ಟಕ್ಕೆ ಸುಮ್ಮನಾಗದೇ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ. ಇದಕ್ಕೆ ವಿಪಕ್ಷಗಳು ಕೈಜೋಡಿಸಿವೆ.
ಏ. 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ವಿಹಾರಧಾಮದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ 26 ಜನರು ಸಾವಿಗೀಡಾಗಿದ್ದಾರೆ. ಉಗ್ರರ ಈ ಕೃತ್ಯಕ್ಕೆ ಭಾರತ ಮಾತ್ರವಲ್ಲ ಅಮೆರಿಕ ಇನ್ನಿತರ ರಾಷ್ಟ್ರಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ತಾನು ಮುಂದೆ ಕೈಗೊಳ್ಳಬೇಕಾದ ನಿರ್ಧಾರಗಳ ಕುರಿತಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಏ. 24ರಂದು ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿತ್ತು.
ಸಭೆಯಲ್ಲಿ ಸರ್ಕಾರದ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರೆ, ವಿಪಕ್ಷಗಳ ನಾಯಕರಲ್ಲಿ ಪ್ರಧಾನವಾಗಿ ಲೋಕಸಭೆಯ ವಿರೋಧ ಪಕ್ಷಗಳ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆ, ಆಮ್ ಆದ್ಮಿ ಪಾರ್ಟಿಯ ಸಂಜಯ್ ಸಿಂಗ್, ತೃಣಮೂಲ ಕಾಂಗ್ರೆಸ್‌ನ ಸುದೀಪ್ ಬಂಡೋಪಾಧ್ಯಾಯ ಸೇರಿದಂತೆ ಹಲವಾರು ನಾಯಕರು ಭಾಗವಹಿಸಿದ್ದರು.
ಭದ್ರತಾ ಲೋಪ ಒಪ್ಪಿಕೊಂಡ ಸರ್ಕಾರ
ಈ ಸಂದರ್ಭದಲ್ಲಿ ಸರ್ಕಾರವೂ ಸಹ ಭದ್ರತಾ ವೈಫಲ್ಯದಿಂದಲೇ ಪಹಲ್ಗಾಮ್ ಘಟನೆ ಆಗಿರುವುದಾಗಿ ಒಪ್ಪಿಕೊಂಡಿತು. ಸಭೆಯ ನಂತರ ಮಾತನಾಡಿದ ಕಿರಣ್ ರಿಜಿಜು, ಸಭೆಯಲ್ಲಿ ಭದ್ರತಾ ಲೋಪವಾಗಿರುವ ಬಗ್ಗೆ ವಿಪಕ್ಷಗಳು ಗಮನ ಸೆಳೆದವು. ಸರ್ಕಾರ ಕೂಡ ಅದನ್ನು ಒಪ್ಪುತ್ತದೆ. ಭವಿಷ್ಯದಲ್ಲಿ ಇಂಥ ಲೋಪಗಳು ಆಗದಂತೆ ಎಚ್ಚರಿಕೆ ವಹಿಸುವುದಾಗಿ ಸಭೆಯಲ್ಲಿ ವಿಪಕ್ಷಗಳ ನಾಯಕರಿಗೆ ನಾವು ಮನವರಿಕೆ ಮಾಡಿದೆವು ಎಂದು ತಿಳಿಸಿದ್ದಾಗಿ ಎಬಿಪಿ ನ್ಯೂಸ್ ಹಾಗೂ ಇಂಡಿಯಾ ಟುಡೇ ಜಾಲತಾಣಗಳು ವರದಿ ಮಾಡಿವೆ.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದಿರುವ ಹತ್ಯಾಕಾಂಡವನ್ನು ಯಾರೂ ಮರೆಯುವ ಹಾಗಿಲ್ಲ. ಕಾಶ್ಮೀರದ ಇತಿಹಾಸದಲ್ಲಿ ಅದೊಂದು ಕಪ್ಪು ಚುಕ್ಕೆಯಾಗಲಿದೆ. ಉಗ್ರವಾದವನ್ನು ಬೇರು ಸಹಿತ ಕಿತ್ತು ಹಾಕಬೇಕಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳಲೇಬೇಕು. ಈ ವಿಚಾರದಲ್ಲಿ ನಾವೆಲ್ಲರೂ ಪಕ್ಷಾತೀತವಾಗಿ ಕೇಂದ್ರಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದರು.