Home ಕರಾವಳಿ ಅನಿವಾಸಿ ಭಾರತೀಯ ಪಿ.ಎ. ಹಮೀದ್ ಪಡುಬಿದ್ರಿಗೆ ‘ಗೌರವ ಡಾಕ್ಟರೇಟ್’, ‘ಎಪಿಜೆ ಅಬ್ದುಲ್ ಕಲಾಂ ಶಾಂತಿ ಪ್ರಶಸ್ತಿ’...

ಅನಿವಾಸಿ ಭಾರತೀಯ ಪಿ.ಎ. ಹಮೀದ್ ಪಡುಬಿದ್ರಿಗೆ ‘ಗೌರವ ಡಾಕ್ಟರೇಟ್’, ‘ಎಪಿಜೆ ಅಬ್ದುಲ್ ಕಲಾಂ ಶಾಂತಿ ಪ್ರಶಸ್ತಿ’ ಪ್ರದಾನ

ಮಂಗಳೂರು: ಕಾನೂನು, ಸಾಮಾಜಿಕ ಮತ್ತು ಮಾನವೀಯ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ, ಪ್ರಸ್ತುತ ಸೌದಿ ಅರೇಬಿಯಾದ ರಿಯಾದ್ ನ ರಕ್ಷಣಾ ಕಂಪೆನಿಯಲ್ಲಿ ಕಾನೂನು ಸಲಹೆಗಾರರಾಗಿ ಉದ್ಯೋಗ ಮಾಡುತ್ತಿರುವ ಅಡ್ವಕೇಟ್ ಪಿ.ಎ. ಹಮೀದ್ ಪಡುಬಿದ್ರಿಯವರಿಗೆ ಚೆನ್ನೈ ಮೂಲದ ‘ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ’ (Global Human Peace University) ವತಿಯಿಂದ “ಗೌರವ ಡಾಕ್ಟರೇಟ್” ಪ್ರದಾನಿಸಲಾಯಿತು.

ಜೊತೆಗೆ, ತಾವು ಹೊಂದಿರುವ ಕಾನೂನು ಶಿಕ್ಷಣದ ಮುಖೇನ ಜನರಿಗೆ ‌ಅವಿರತ ಸಹಾಯಮಾಡಿ ಗಣನೀಯ ಸೇವೆಗೈದ ಪಿ.ಎ.ಹಮೀದ್ ರವರಿಗೆ “APJ ಅಬ್ದುಲ್ ಕಲಾಂ ಶಾಂತಿ ಪ್ರಶಸ್ತಿ” ಯನ್ನೂ ಪ್ರದಾನ ಮಾಡಲಾಗಿದೆ.

ಶನಿವಾರ ತಮಿಳುನಾಡಿನ ಕೋಯಂಬತ್ತೂರಿನ ಸಿಟ್ರ (SITRA) ಸಭಾಂಗಣದಲ್ಲಿ ನಡೆದ ಘಟಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಪಿ.ಎ.ಹಮೀದ್ ರವರು ನೇರವಾಗಿ ಸೌದಿ ಅರೇಬಿಯಾದಿಂದ ಆಗಮಿಸಿ ಈ ಅವಳಿ ಪ್ರಶಸ್ತಿ ಗೌರವವನ್ನು ಸ್ವೀಕರಿಸಿದರು.

ಮೂಲತಃ: ಉಡುಪಿ ಜಿಲ್ಲೆಯ ಪಡುಬಿದ್ರಿಯವರಾದ ಡಾ. ಪಿ.ಎ.ಹಮೀದ್ ರಾಜಕೀಯ, ಸಾಮಾಜಿಕ, ಸಾಮುದಾಯಿಕ, ಸಾಹಿತ್ತಿಕ, ಮಾನವ ಹಕ್ಕುಗಳ ಸಂರಕ್ಷಣೆ ಇತ್ಯಾದಿ ವಿಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಇವರು 1995-2000ನೇ ಸಾಲಿನ ಉಡುಪಿಯ ಪ್ರಪ್ರಥಮ ತಾಲೂಕು ಪಂಚಾಯತ್ ಸದಸ್ಯರಾಗಿ ಪಡುಬಿದ್ರಿ ತಾ. ಪಂ. ಕ್ಷೇತ್ರದಿಂದ ಚುನಾಯಿತರಾಗಿದ್ದರು. ಕರ್ನಾಟಕ ರಾಜ್ಯದಲ್ಲೇ ಅಂದಿನ ಅತ್ಯಂತ ಕಿರಿಯ ಚುನಾಯಿತ ತಾ.ಪ.ಸದಸ್ಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಇವರು ತಮ್ಮ ಪ್ರಾರ್ಥಮಿಕ ವಿದ್ಯಾಭ್ಯಾಸವನ್ನು ಪಡುಬಿದ್ರಿಯ ಉರ್ದು ಶಾಲೆಯಲ್ಲೂ, ಪ್ರೌಢ ಮತ್ತು ಪಿಯುಸಿಯನ್ನು ಪಡುಬಿದ್ರಿ ಜೂನಿಯರ್ ಕಾಲೇಜ್ ನಲ್ಲೂ ಮುಗಿಸಿ, ಪದವಿಯನ್ನು ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಮಾಡಿರುತ್ತಾರೆ. ಅನಂತರ, ಕಾನೂನು ಪದವಿಯನ್ನು ಮಂಗಳೂರಿನ ಎಸ್ ಡಿ ಯಂ ಲಾ ಕಾಲೇಜ್ ನಲ್ಲಿ ಮುಗಿಸಿರುತ್ತಾರೆ.

ಇತ್ತೀಚೆಗಿನ ಕೋವಿಡ್ 19 ಸಂದರ್ಭ ಸೌದಿ ಅರೇಬಿಯಾಕ್ಕೆ ಹೊರಟು ಪ್ರಯಾಣ ನಿಷೇಧದ ನಿಮಿತ್ತ ದುಬೈಯಲ್ಲಿ ಸಿಲುಕಿದ್ದ ಭಾರತೀಯರನ್ನು (ಸೌದಿಗೆ) ಕರೆಸುವ ಸಲುವಾಗಿ ಅವಿರತ ಶ್ರಮವಹಿಸಿ, ವಿವಿಧ ರೀತಿಯಲ್ಲಿ ಸಹಾಯ ಹಸ್ತ ನೀಡಿದ್ದರು.

ಅಲ್ಲದೆ, ರಶ್ಯಾ-ಯುಕ್ರೇನ್ ಯುದ್ಧದಾರಂಭದಲ್ಲಿ ಯುಕ್ರೇನ್ ನ ರಾಜಧಾನಿ ಕೀವ್ ಮತ್ತು ಇತರ ಕಡೆಗಳಲ್ಲಿ ಸಂಕಷ್ಟಲ್ಲಿದ್ದ ಭಾರತೀಯರು, ಅದರಲ್ಲೂ ವಿದ್ಯಾರ್ಥಿಗಳು ಹಾಗೂ ಅವರ ಪೋಷಕ ರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿ, ಭಾರತೀಯ ವಿದೇಶಾಂಗ ಸಚಿವಾಲಯ ಹಾಗೂ ಯುಕ್ರೇನ್-ಪೋಲ್ಯಾಂಡ್- ಅರ್ಮೇನಿಯಾ-ಸ್ಲುವೇಕಿಯಾ ಮುಂತಾದ ಕಡೆಗಳಲ್ಲಿ ಕಾರ್ಯಾಚರಿಸುತ್ತಿದ್ದ ಭಾರತೀಯ ರಾಯಭಾರಿ ಅಧಿಕಾರಿಗಳೊಂದಿಗೆ ಅವಿರತ ಸಂಪರ್ಕ ಸಾಧಿಸಿ ಸುಮಾರು 225 ಮಂದಿಯನ್ನು ಪೋಲ್ಯಾಂಡ್ ಮುಖೇನ “ಆಪರೇಷನ್ ಗಂಗಾ ಮೂಲಕ ಭಾರತಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು.

ಅದೇರೀತಿ, ಅನಿವಾಸಿ ಭಾರತೀಯರ ಕಾರ್ಮಿಕ ಹಕ್ಕುಗಳ ಪ್ರಕರಣಕ್ಕೆ ಮತ್ತು ಮಾನವ ಹಕ್ಕುಗಳು ಉಲ್ಲಂಘನೆ ಗಳಿಗೆ ಸಂಬಂಧಿಸಿದ ವಿಚಾರಗಳನ್ನು ಕಾನೂನು ರೀತಿಯ ಮುಖಾಂತರ ಕೈಗೆತ್ತಿಕೊಂಡು ಪರಿಹಾರ ಒದಗಿಸಿಕೊಡುವಲ್ಲಿ ಡಾ. ಹಮೀದ್ ರವರು ಯಶಸ್ವಿಯಾಗಿದ್ದರು. ಮತ್ತು ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದ ಮಹಿಳೆಯರ ಸಹಿತ ಹಲವರನ್ನು ಭಾರತಕ್ಕೆ ವಾಪಸ್ ಕಳುಹಿಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು.

ಡಾ. ಪಿ.ಎ. ಹಮೀದ್ ಪಡುಬಿದ್ರಿ ಇವರು ದಿವಂಗತ ಅರಬಿ ಅಬ್ದುಲ್ ಖಾದರ್ ಮತ್ತು ಆಯಿಶಾರವರ ಏಳು ಮಕ್ಕಳಲ್ಲಿ ಕಿರಿಯ ಮಗನಾಗಿರುತ್ತಾರೆ.‌ ಇವರ ಹಿರಿಯ ಸಹೋದರರಾದ ಪಿ.ಎ.ರಹಿಮಾನ್, ಪಿ.ಎ.ಹುಸೈನ್ ರವರು ಸಾಮುದಾಯಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದರೆ, ಇನ್ನೋರ್ವ ಸಹೋದರ ಪಿ.ಎ.ಮೊಹಿದ್ದೀನ್ ರವರು ಗಡಿ ಭದ್ರತಾ ಪಡೆ (BSF) ಬೆಂಗಳೂರು ವಲಯದ Assistant Commandant (AC) ಆಗಿ ಸೇವೆಸಲ್ಲಿಸುತ್ತಿದ್ದಾರೆ.

Join Whatsapp
Exit mobile version