ನವದೆಹಲಿ: ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಬುಧವಾರ ರಾತ್ರಿ ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ 2025 ರ ಕರಡಿನ ಪ್ರತಿಯನ್ನು ಹರಿದು ಪ್ರತಿಭಟಿಸಿದ್ದಾರೆ.
ಸದನದಲ್ಲಿ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಓವೈಸಿ, ಇದು ‘ಭಾರತದ ನಂಬಿಕೆಯ ಮೇಲಿನ ದಾಳಿ’ಯಾಗಿದ್ದು, ಮುಸ್ಲಿಮರನ್ನು ಅವಮಾನಿಸಲು ಇದನ್ನು ತರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಈ ಮಸೂದೆಯನ್ನು ತರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಗುಂಪಿನ ವಿರುದ್ಧ ಯುದ್ಧ ಘೋಷಿಸಿದ್ದಾರೆ ಎಂದು ಕಿಡಿಕಾರಿದರು.
ಈ ಬಗ್ಗೆ ದೆಹಲಿ ಎಐಎಂಐಎಂ ಅಧ್ಯಕ್ಷ ಶೋಯೆಬ್ ಜಮೈ ಅವರು ಓವೈಸಿಯ ಭಾಷಣದ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ತಾಣ ‘X’ ನಲ್ಲಿ ಹಂಚಿಕೊಂಡು ಬೆಂಬಲ ವ್ಯಕ್ತಪಡಿಸಿದ್ದು, ‘ಹೇಡಿಗಳ ಗುಂಪಿಗೆ ಒಬ್ಬ ವ್ಯಕ್ತಿ ಸಾಕು’ ಎಂದು ಬರೆದ ಅವರು, ಓವೈಸಿ ಸಂಸತ್ತಿನಲ್ಲಿ ಈ ಹಿಂದೆ ಸಿಎಎ ಕಾನೂನು ಮಸೂದೆಯನ್ನು ಸಹ ಹರಿದಿದ್ದರು ಎಂದು ನೆನಪಿಸಿ ಪೋಸ್ಟ್ ಮಾಡಿದ್ದಾರೆ.