ವಿಜಯಪುರ: ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 4 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಾರಿ 5 ತಿಂಗಳಲ್ಲೇ 250ಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಅರಕೇರಿಯಲ್ಲಿ ನಳಿನ್ ಕುಮಾರ್ ನೇತೃತ್ವದಲ್ಲಿ ಬರ ವೀಕ್ಷಣೆ ಮಾಡಲಾಗಿದೆ. ಈ ವೇಳೆ ಸಿದ್ದರಾಮಯ್ಯ ಅವರ ಬ್ರೇಕ್ ಪಾಸ್ಟ್ ಮೀಟಿಂಗ್ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ವಿಜಯಪುರದಲ್ಲಿ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ರಾಜ್ಯ ಸರ್ಕಾರ ಪರಿಹಾರ ನೀಡಿಲ್ಲ. ಆತ್ಮಹತ್ಯೆ ಸರಣಿಯಲ್ಲಿ ನಡೆಯುತ್ತಿವೆ, ಬರದಿಂದ ರೈತ ಕಂಗೆಟ್ಟಿದ್ದಾನೆ. ಈ ಕುರಿತ ಯೋಚನೆ ಸಿಎಂಗೆ ಇಲ್ಲ, ಈ ಬಗ್ಗೆ ಸಿಎಂ ತಲೆಕೆಡಿಸಿಕೊಂಡಿಲ್ಲ. ಬ್ರೇಕ್ ಫಾಸ್ಟ್, ಬೇರೆ ಫಾಸ್ಟ್, ಎಲ್ಲಾ ಮಾಡುತ್ತಿದ್ದಾರೆ. ರೈತರ ಬಗ್ಗೆ ಕಾಳಜಿ ಇಲ್ಲ. ರೈತರ ರಕ್ಷಣೆ ಮಾಡಿದರೆ ಸಿಎಂ ಸೀಟ್ ಉಳಿಯುತ್ತದೆ, ರೈತರ ಕಡೆಗಣಿಸಿದರೆ ಇವರ ಸೀಟ್ ಉಳಿಯೋದಿಲ್ಲ. ಬರದ ನಡುವೆ ಸಿಎಂಗೆ ರಾಜ್ಯದ ರೈತರ ಹಿತರಕ್ಷಣೆ ಮುಖ್ಯವಲ್ಲ. ಖುರ್ಚಿ ಉಳಿಸಿಕೊಳ್ಳುವುದೇ ಮುಖ್ಯವಾಗಿದೆ ಎಂದರು.