ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಇದರ ವತಿಯಿಂದ (ನಾಳೆ) ನ.5ರಂದು ಸಾಂತ್ವನದ ಸಂಚಾರ- ಎ ಡೇ ವಿಥ್ ಬೆಡ್ ರಿಡನ್ ಎಂಬ ಸಾಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೋಸ್ಟಲ್ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಶರೀಫ್ ಅಬ್ಬಾಸ್ ವಳಾಲ್ ತಿಳಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಹತ್ತೂರು ಸುತ್ತಲೂ ಈ ವರೆಗೆ ನಡೆಯದ “ಸಾಂತ್ವನದ ಸಂಚಾರ” ಎಂಬ ವಿನೂತನ ಸಾಮಾಜಿಕ ಕಳಕಳಿಯ ಕಾರ್ಯಕ್ರಮವೊಂದನ್ನು “ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ)” ಸಂಸ್ಥೆ ಹಮ್ಮಿಕೊಂಡಿದೆ. “ಸಾಂತ್ವನದ ಸಂಚಾರ” ಹೆಸರೇ ಹೇಳುವಂತೆ ಅನಿವಾರ್ಯ ಕಾರಣಗಳಿಂದ ಅನಾರೋಗ್ಯ ಪೀಡಿತರಾಗಿ ಅಥವಾ ನಡೆದಾಡಲು ಅಶಕ್ತರಾಗಿ ಮನೆಯ ನಾಲ್ಕು ಗೋಡೆಯೊಳಗೆ ಹಾಸಿಗೆಯಲ್ಲಿಯೇ ಹೊರ ಜಗತ್ತನ್ನು ನೋಡಲು ಅವಕಾಶವಂಚಿತರಾಗಿ ದಿನ ಕಳೆಯುತ್ತಿರುವವರೊಂದಿಗೆ ಸಾಮಾನ್ಯ ಜನರಂತೆ ಪಾರ್ಕ್, ಬೀಚ್,ಟ್ರೀ ಹೌಸ್, ಕಡಲ ಕಿನಾರೆ ಮತ್ತು ಮಾಲ್’ಗಳಿಗೆ ವಿಹಾರ ಕರೆದುಕೊಂಡು ಹೋಗಿ ಅವರನ್ನು ಸಾಧ್ಯವಾದಷ್ಟು ಮಟ್ಟಿಗೆ ಸಾಂತ್ವನಿಸುವ ಪ್ರಾಮಾಣಿಕ ಪ್ರಯತ್ನ ಎಂದರು.
ಪರಿಣಿತ ಡಾಕ್ಟರ್’ಗಳು, ನರ್ಸ್’ಗಳು, ಆಂಬುಲೆನ್ಸ್ ಗಳು, ಮತ್ತು 40 ಕ್ಕೂ ಹೆಚ್ಚು ಅನುಭವಿ ಸ್ವಯಂಸೇವಕರ ತಂಡ ಈ “ಸಾಂತ್ವನದ ಸಂಚಾರ” ದಲ್ಲಿ ರೋಗಿಗಳನ್ನು ಸಾಂತ್ವನಿಸುತ್ತಾ ದಿನಪೂರ್ತಿ ಸಂಚರಿಸಲಿದೆ. ಸಂಸ್ಥೆಯ ಉಸ್ತುವಾರಿಗಳು ಪ್ರತೀ ನಿಮಿಷವೂ ಮೈಯ್ಯೆಲ್ಲಾ ಕಣ್ಣಾಗಿಸಿ ವಿಶೇಷ ಮುತುವರ್ಜಿಯಿಂದ ಈ ಸಂಚಾರವನ್ನು ಆರೋಗ್ಯವಾಗಿ ಪೂರ್ತಿಗೊಳಿಸಲು ಸಜ್ಜಾಗಿದ್ದಾರೆ. ಅಲ್ಲದೆ ಕೋಸ್ಟಲ್ ಫ್ರೆಂಡ್ಸ್ ಸಂಸ್ಥೆಯ ಈ ಸಾಂತ್ವನ ಯೋಜನೆಯಲ್ಲಿ ಇದೇ ದಿನ ಮೊದಲ ಹಂತವಾಗಿ ಸುಮಾರು 2 ಲಕ್ಷ ವೆಚ್ಚದಲ್ಲಿ 10 ವೈದ್ಯಕೀಯ ಹಾಸಿಗೆಗಳ ಲೋಕಾರ್ಪಣೆಯೂ ನಡೆಯಲಿದೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೋಸ್ಟಲ್ ಫ್ರೆಂಡ್ಸ್ ಉಪಾಧ್ಯಕ್ಷರಾದ ಅಬ್ದುಲ್ ರೆಹಮಾನ್, ಫೈಝಲ್ ರೆಹಮಾನ್, ಕಾರ್ಯದರ್ಶಿ ರಿಯಾಝ್ ಕಣ್ಣೂರು, ಸಾಂತ್ವನದ ಸಂಚಾರದ ಸಂಚಾಲಕ ಶೌಕತ್ ಅಲಿ, ಟ್ರಸ್ಟಿ ಝುಲ್ಫಿಕರ್ ಖಾಸಿಂ ಉಪಸ್ಥಿತರಿದ್ದರು.