ಮುಂಬೈ: ಮುಂಬೈನ ಎನ್ ಸಿಬಿ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ವಿಜೆಲೆನ್ಸ್ ತನಿಖೆಗೆ ಆದೇಶ ನೀಡಲಾಗಿದೆ. ಎನ್ ಸಿಬಿ ಪ್ರಧಾನ ಉಪನಿರ್ದೇಶಕ, ಮುಖ್ಯ ವಿಜಿಲೆನ್ಸ್ ಅಧಿಕಾರಿ (ಸಿವಿಒ) ಆಗಿರುವ ಗ್ಯಾನೇಶ್ವರ್ ಸಿಂಗ್ ಅವರು ತನಿಖೆ ನಡೆಸಲಿದ್ದಾರೆ.ಡ್ರಗ್ಸ್ ಪ್ರಕರಣದಲ್ಲಿ 25ಕೋಟಿ ರುಪಾಯಿ ಲಂಚ ಕೇಳಿದ್ದಾರೆ ಎಂಬ ಆರೋಪದಡಿ ಸಮೀರ್ ವಾಂಖೆಡೆ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ಪ್ರಭಾಕರ್ ಸೈಲ್ ಎಂಬಾತ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದು, ಕಳೆದ ಅಕ್ಟೋಬರ್ 24 ರಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದು,ಆರ್ಯನ್ ಖಾನ್ ನ್ನು ಈ ಪ್ರಕರಣದಿಂದ ಕೈಬಿಡಲು ಎನ್ ಸಿಬಿ ಅಧಿಕಾರಿ ಹಾಗೂ ಇನ್ನಿತರ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾನೆ. ತಾನು ಈ ಪ್ರಕರಣದ ಮತ್ತೋರ್ವ ಸಾಕ್ಷಿದಾರ ಹಾಗೂ ಎನ್ ಸಿಬಿ ರೈಡ್ ನಂತರ ಕಣ್ಮರೆಯಾಗಿರುವ ಕೆಪಿ ಗೋಸಾವಿಗೆ ಬಾಡಿಗಾರ್ಡ್ ಎಂದೂ ಹೇಳಿಕೊಂಡಿದ್ದಾನೆ. ಗೋಸಾವಿ ಶಾರೂಖ್ ಖಾನ್ ಅವರ ಮ್ಯಾನೇಜರ್ ರನ್ನು ಭೇಟಿ ಮಾಡಿ ವಾಂಖೆಡೆ ಅವರ ಸಮ್ಮುಖದಲ್ಲಿ 9-10 ಬ್ಲಾಂಕ್ ಚೆಕ್ ಗಳಿಗೆ ಸಹಿ ಹಾಕಲು ಕೇಳುತ್ತಿದ್ದನ್ನು ತಾನು ನೋಡಿದ್ದೇನೆ ಎಂದು ಸೈಲ್ ಗಂಭೀರವಾಗಿ ಆರೋಪಿಸಿದ್ದಾನೆ.
ಈ ಬಗ್ಗೆ ತನಿಖೆ ನಡೆಸುತ್ತಿರುವ ಗ್ಯಾನೇಶ್ವರ್ ಸಿಂಗ್ ಮಾಧ್ಯಮಗಳೊಂದಿಗೆ ಮಾತನಾಡಿ, ನಮ್ಮ ಯಾವುದೇ ಸಿಬ್ಬಂದಿ ವಿರುದ್ಧ ಯಾವುದೇ ಆರೋಪ ಬಂದರೂ ತನಿಖೆಗೆ ನಾವು ಮುಕ್ತರಾಗಿದ್ದೇವೆ ಎಂದಿದ್ದಾರೆ. ಈ ಮೇಲಿನ ಆರೋಪದ ಪ್ರಮಾಣಪತ್ರ ಹಾಗೂ ವರದಿಗಳನ್ನು ಅಧಿಕಾರಿಗಳಿಂದ ಪಡೆದಿದ್ದು, ಎನ್ ಸಿಬಿ ನಿರ್ದೇಶಕರು ಈ ಆರೋಪವನ್ನು ಗಮನಿಸಿದ್ದು, ವಿಜಿಲೆನ್ಸ್ ವಿಭಾಗಕ್ಕೆ ತನಿಖೆಗಾಗಿ ಕಳುಹಿಸಿದ್ದೇವೆ ಎಂದಿದ್ದಾರೆ.