Home ರಾಜ್ಯ ಹಾರ-ತುರಾಯಿಗೆ ವಿರೋಧ: ನಾಳೆ ಪುಷ್ಪ ಮಾರಾಟಗಾರರಿಂದ ವಿನೂತನ ಪ್ರತಿಭಟನೆ

ಹಾರ-ತುರಾಯಿಗೆ ವಿರೋಧ: ನಾಳೆ ಪುಷ್ಪ ಮಾರಾಟಗಾರರಿಂದ ವಿನೂತನ ಪ್ರತಿಭಟನೆ

ಬೆಂಗಳೂರು: ಸರಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್‌ಅವರು ಸರಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿಯನ್ನು ನೀಡದಂತೆ ಹೊರಡಿಸಿರುವ ಆದೇಶವನ್ನು ಈ ಕೂಡಲೇ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲು ದಕ್ಷಿಣ ಭಾರತದ ಪುಷ್ಪ ಬೆಳೆಗಾರರ ಸಂಘ, ರಾಜ್ಯದ ಎಲ್ಲಾ ಪುಷ್ಪ ಬೆಳೆಗಾರರು ಹಾಗೂ ಪುಷ್ಪ ಬೆಳೆಗಾರರ ರೈತ ಸಂಘಟನೆಗಳು, ರಾಜ್ಯದ ಎಲ್ಲಾ ಪುಷ್ಪ ಮಾರಾಟಗಾರರು ಮತ್ತು ಪುಷ್ಪ ಮಾರಾಟಗಾರರ ಸಂಘಗಳ ವತಿಯಿಂದ ನಾಳೆ (ಗುರುವಾರ) ಬೃಹತ್‌ಪ್ರತಿಭಟನೆಯನ್ನು ಆಯೋಜಿಸಲಾಗಿದೆ.


ರಾಜ್ಯ ಸರಕಾರ ಮತ್ತು ಸರಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿ ನೀಡದೆ ಕನ್ನಡ ಪುಸ್ತಕಗಳನ್ನು ನೀಡುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶ ರಾಜ್ಯದ ಹೂ ಬೆಳೆಗಾರರು ಹಾಗೂ ರೈತರ ಮೇಲೆ ಗಧಾಪ್ರಹಾರವಾಗಿದೆ. ಈ ಆದೇಶವನ್ನು ತಕ್ಷಣ ಹಿಂದಕ್ಕೆ ತಗೆದುಕೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸಲು ದಕ್ಷಿಣ ಭಾರತದ ಪುಷ್ಪ ಬೆಳೆಗಾರರ ಸಂಘದ ಅಧ್ಯಕ್ಷರಾದ ಟಿ.ಎಂ ಅರವಿಂದ್‌, ನಿರ್ದೇಶಕರಾದ ಶ್ರೀಕಾಂತ್‌ ಬೆಲ್ಲಂಪಳ್ಳಿ, ರಾಜ್ಯದ ಎಲ್ಲಾ ಹೂ ಬೆಳೆಗಾರರರು, ಪುಷ್ಟ ಕೃಷಿ ರೈತ ಸಂಘಟನೆಗಳು ಮತ್ತು ರಾಜ್ಯದ ಎಲ್ಲಾ ಪುಷ್ಟ ಮಾರಾಟಗಾರರು ಮತ್ತು ಪುಷ್ಪ ಮಾರಾಟಗಾರರ ಸಂಘದ ನೇತೃತ್ವದಲ್ಲಿ ಬೆಂಗಳೂರಿನ ಅಂತಾರಾಷ್ಟ್ರೀಯ ಪುಷ್ಪ ಮಾರುಕಟ್ಟೆಯ ಎದುರು (ಬೆಳಿಗ್ಗೆ 11.15 ಕ್ಕೆ), ರಾಜ್ಯದ ಹೂಬೆಳೆಗಾರರು ಹಾಗೂ ರೈತರ ಮತ್ತು ಮಾರಾಟಗಾರರ ಬೃಹತ್‌ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಹೂಗುಚ್ಚ, ಹಾರ, ಹಣ್ಣಿನ ಬುಟ್ಟಿಯನ್ನು ಹಿಡಿದುಕೊಂಡು ವಿನೂತನವಾಗಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ದಕ್ಷಿಣ ಭಾರತ ಪುಷ್ಪ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಎಂ.ಅರವಿಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version