ಬಗ್ದಾದ್ : ಐಎಸ್ಐಎಲ್ ಸಶಸ್ತ್ರ ಬಂಡುಕೋರರಿಂದ ಅಪಹರಣಕ್ಕೊಳಗಾಗಿ ಇದೀಗ 7 ವರ್ಷಗಳ ಬಳಿಕ ಯಝೀದಿ ಸಮುದಾಯಕ್ಕೆ ಮರಳಲು ಬಯಸುತ್ತಿರುವ ಮಹಿಳೆಯರನ್ನು ಸ್ವೀಕರಿಸಲು ಉತ್ತರ ಇರಾಕ್ ನ ಯಝೀದಿ ಸುಪ್ರೀಮ್ ಕಮಿಟಿ ಒಪ್ಪಿಕೊಂಡಿದೆ. ಆದರೆ ಆ ಮಹಿಳೆಯರು ಜನ್ಮನೀಡಿರುವ ಮಕ್ಕಳನ್ನು ಯಝೀದಿ ಸಮುದಾಯಕ್ಕೆ ಸೇರಿಸಿಕೊಳ್ಳಲು ಸುಪ್ರೀಮ್ ಕಮಿಟಿ ನಿರಾಕರಿಸಿದೆ. ಈ ಬಗ್ಗೆ ಹಲವು ಸಮಯದಿಂದ ಮಾತುಕತೆ ನಡೆಯುತ್ತಿತ್ತು. ಇರಾಕ್ ನ ಕುರ್ದಿಸ್ತಾನ್ ಪ್ರಾಂತ್ಯದ ಅಮೆರಿಕದ ಅಧಿಕಾರಿ ಪೀಟರ್ ಗಲ್ಬ್ರೇತ್ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದ್ದರು.
2014ರ ಆಗಸ್ಟ್ ನಲ್ಲಿ ಉತ್ತರ ಇರಾಕ್ ನ ಯಝೀದಿ ಸಮುದಾಯದ ಮೇಲೆ ಐಎಸ್ಐಎಲ್ ಸಶಸ್ತ್ರ ಬಂಡುಕೋರರು ಬರ್ಬರ ಆಕ್ರಮಣ ನಡೆಸಿ ಹಲವು ಮಂದಿಯನ್ನು ಹತ್ಯೆಗೈದಿದ್ದರು. ಈ ಘಟನೆಯ ಬಳಿಕ 3000 ದಷ್ಟು ಮಹಿಳೆಯರು ನಾಪತ್ತೆಯಾಗಿದ್ದರು. ಬಂಡುಕೋರರು ಯಝೀದಿ ಮಹಿಳೆಯರನ್ನು ಒತ್ತೆಯಿರಿಸಿಕೊಂಡಿದ್ದರು.
ಯಝೀದಿ ಎಂಬುದು ಇಸ್ಲಾಮ್, ಕ್ರಿಶ್ಚಿಯನ್, ಯಹೂದಿಗಿಂತಲೂ ವಿಭಿನ್ನ ಧಾರ್ಮಿಕ ನಂಬಿಕೆ ಹೊಂದಿರುವ ಹಳೆಯ ಪ್ರಾಂತೀಯ ಧರ್ಮವಾಗಿದೆ. ಯಝೀದಿ ತಂದೆ ತಾಯಿಗೆ ಜನಿಸಿದ ಹೊರತಾಗಿ ಇತರ ಧರ್ಮದಿಂದ ಯಝೀದಿ ಧರ್ಮಕ್ಕೆ ಮತಾಂತರವಾಗುವಂತಿಲ್ಲ. ಹಾಗಾಗಿ ಅಪಹರಣಕ್ಕೊಳಗಾದ ಯಝೀದಿ ಮಹಿಳೆಯರನ್ನು ಮಾತ್ರವೇ ಒಪ್ಪಿಕೊಳ್ಳಲು ಸಾಧ್ಯವೇ ಹೊರತು ಅತ್ಯಾಚಾರಕ್ಕೊಳಗಾಗಿ ಜನಿಸಿದ ಮಕ್ಕಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಯಝೀದಿ ನಾಯಕ ಪ್ರಿನ್ಸ್ ಹಾಝೆಮ್ ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ಪೂರ್ವ ಸಿರಿಯದ ಅಲ್ಹೋಲ್ ನಿರಾಶ್ರಿತರ ಶಿಬಿರದಲ್ಲಿರುವ 9 ಮಹಿಳೆಯರು ಮತ್ತು 12 ಮಕ್ಕಳನ್ನು ಇರಾಕ್ ಗಡಿಯೊಳಗೆ ತರುವ ಎಲ್ಲ ಸಿದ್ಧತೆಯೂ ನಡೆದಿತ್ತು.