Home ಟಾಪ್ ಸುದ್ದಿಗಳು ಬೆಂಗಳೂರಿಗೆ ಬರುವ ಹೊರ ರಾಜ್ಯದವರಿಗೆ ಕೋವಿಡ್ ವರದಿ ಕಡ್ಡಾಯ : ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ...

ಬೆಂಗಳೂರಿಗೆ ಬರುವ ಹೊರ ರಾಜ್ಯದವರಿಗೆ ಕೋವಿಡ್ ವರದಿ ಕಡ್ಡಾಯ : ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

► ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿತರ ಕೈಗೆ ಗುರುತು

ಬೆಂಗಳೂರು : ಬೆಂಗಳೂರಿಗೆ ಯಾವುದೇ ರಾಜ್ಯದಿಂದ ಬಂದರೂ ಕೋವಿಡ್ ವರದಿ ನೀಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಬಿಬಿಎಂಪಿ ಎಂಟು ವಲಯಗಳ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆಸಿದ ಬಳಿಕ ಸಚಿವರು ಮಾತನಾಡಿದರು.

ಬೆಂಗಳೂರಿನಲ್ಲಿ 1,400 ಸೋಂಕಿತರು ಪತ್ತೆಯಾಗಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಇದು ಅತಿ ಹೆಚ್ಚು. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಹೊರರಾಜ್ಯಗಳಿಂದ ಬರುತ್ತಿರುವವರಲ್ಲಿ ಹೆಚ್ಚಾಗಿ ಕೋವಿಡ್ ಸೋಂಕು ಕಂಡುಬರುತ್ತಿದೆ. ಕರ್ನಾಟಕಕ್ಕೆ ಕೇರಳ, ಮಹಾರಾಷ್ಟ್ರ, ಪಂಜಾಬ್ ಚಂಡೀಗಡದಿಂದ ಬಂದವರಿಗೆ ಮಾತ್ರ ಕೊರೊನಾ ಪರೀಕ್ಷೆ ಮಾಡಬೇಕೆಂದು ಸೂಚಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಎಲ್ಲ ರಾಜ್ಯದಿಂದ ಬಂದವರಿಗೆ ಈ ನಿಯಮ ಅನ್ವಯಿಸಲು ತೀರ್ಮಾನಿಸಲಾಗಿದೆ ಎಂದರು.

ಸಭೆ, ಸಮಾರಂಭಗಳಲ್ಲಿ ಒಳಾಂಗಣದಲ್ಲಿ 200, ಹೊರಾಂಗಣದಲ್ಲಿ 500 ಮಂದಿ ಸೇರಲು ಅವಕಾಶ ನೀಡಲಾಗಿದೆ. ಪ್ರತಿ ವಾರ್ಡ್ ಗೆ ಒಂದರಂತೆ ಆಂಬ್ಯುಲೆನ್ಸ್ ನಿಯೋಜಿಸಲಾಗಿದೆ. ಸೋಂಕಿತರ ಸಂಖ್ಯೆ ನೀಡಿಕೊಂಡು ಆಂಬ್ಯುಲೆನ್ಸ್ ಸಂಖ್ಯೆ ಕೂಡ ಹೆಚ್ಚಿಸಲಾಗುವುದು. ಸೋಂಕಿತರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು, ನಿಗಾ ಇರಿಸುವುದು ಮೊದಲಾದ ಕ್ರಮಗಳನ್ನು ನಿರ್ಧರಿಸಲಾಗುವುದು ಎಂದರು. ಸೋಂಕು ನಿಯಂತ್ರಣಕ್ಕೆ ನಿಗದಿತ ಪ್ರದೇಶಗಳಲ್ಲಿ ಸ್ಯಾನಿಟೈಜ್ ಮಾಡಲಾಗುವುದು. ಹಾಸಿಗೆ ಲಭ್ಯತೆ, ಐಸಿಯು ಲಭ್ಯತೆ ಬಗ್ಗೆ ಆನ್ ಲೈನ್ ನಲ್ಲೇ ಮಾಹಿತಿ ದೊರೆಯಲು ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರನ್ನು ಕೋವಿಡ್ ಮುಕ್ತ ಮಾಡಲು ಜನರ ಸಹಕಾರ ಬೇಕಿದೆ ಎಂದರು.

ಕೈಗೆ ಗುರುತು

ಈ ಬಾರಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿತರ ಕೈಗೆ ಮಾತ್ರ ಸೀಲ್ ಹಾಕಲು ನಿರ್ಧರಿಸಲಾಗಿದೆ. ಯುವಕರು, ರೋಗ ಲಕ್ಷಣ ಇಲ್ಲದರು ಸೋಂಕಿತರಾದರೂ ಹೊರಗೆ ಓಡಾಡುವುದರಿಂದ ಸೋಂಕು ಹರಡುತ್ತದೆ. ಇದನ್ನು ನಿಯಂತ್ರಿಸಲು ಕೈಗೆ ಗುರುತು ಹಾಕಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ರೂಪಾಂತರಿ ವೈರಸ್

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 45 ವರ್ಷ ವಯಸ್ಸು ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕೆಂದು ಆದೇಶವಾಗಿದೆ. ದೇಶದಲ್ಲಿ ಬದಲಾದ ತಳಿಯ ಪರೀಕ್ಷೆ ಮಾಡಲಾಗಿದೆ. ಕೆಲವರಲ್ಲಿ ಹೊಸ ವೈರಾಣು ಕಾಣಿಸಿಕೊಂಡಿದ್ದು, ಅಂತಹ ಸುಮಾರು 700 ಪ್ರಕರಣ ಪತ್ತೆಯಾಗಿದೆ. ತಜ್ಞರ ಪ್ರಕಾರ ಇದು ಬಹಳ ಬೇಗ ಹರಡುತ್ತದೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳಾಗುತ್ತಿವೆ. ಆದ್ದರಿಂದ ಸಾರ್ವಜನಿಕರು ಮುಂದಿನ 2 ತಿಂಗಳು ಬಹಳ ಎಚ್ಚರಿಕೆಯಿಂದಿರಬೇಕು. ಸೋಂಕಿನ ಪ್ರಕರಣಗಳು ಹೆಚ್ಚಾಗಬಾರದು. ಒಂದು ಪ್ರಕರಣ ಕಂಡುಬಂದರೆ 20 ಸಂಪರ್ಕಿತರನ್ನು ಪತ್ತೆ ಮಾಡಿ ಪರೀಕ್ಷೆ ಮಾಡಿಸಲಾಗುತ್ತಿದೆ ಎಂದರು.

ಚುನಾವಣೆ ಎಂದಾಕ್ಷಣ ಕೊರೊನಾ ಬರದೇ ಇರುವುದಿಲ್ಲ. ಜನರು ಗುಂಪುಗೂಡುವುದನ್ನು ಕಡಿಮೆ ಮಾಡುವುದೇ ನಮಗೆ ಮುಖ್ಯ. ಹೀಗಾಗಿ ಚುನಾವಣಾಧಿಕಾರಿಗಳನ್ನು ಭೇಟಿ ನೀಡಿ ಈ ಕುರಿತು ಚರ್ಚಿಸಲಾಗುವುದು. ಚಿತ್ರರಂಗದ ಕಲಾವಿದರಿಗೂ ಮನವಿ ಮಾಡಲಾಗಿದೆ. ನಾಯಕ ನಟರು ಕೂಡ ಸಾಮಾಜಿಕ ಕಳಕಳಿ ಹೊಂದಿದ್ದು, ಅವರು ಕೂಡ ಈ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಸಹಕಾರ ನೀಡಬೇಕು ಎಂದು ಕೋರಿದರು.

ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವರು, ವಿಕ್ಟೋರಿಯಾದಲ್ಲಿ 400 ಹಾಸಿಗೆ ಮೀಸಲಿಡಲಾಗಿದೆ. ಪ್ರಕರಣ ಹೆಚ್ಚಿದರೆ ಹಾಸಿಗೆ ಸಂಖ್ಯೆ ಹೆಚ್ಚಿಸಲಾಗುವುದು. ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ, ಬೌರಿಂಗ್, ಚರಕ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗುವುದು. ರೋಗಿಗಳ ಸಂಖ್ಯೆ ಇನ್ನೂ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳ ಸಹಾಯ ಪಡೆಯಲಾಗುವುದು. ಈ ಕುರಿತು ಖಾಸಗಿ ಆಸ್ಪತ್ರೆಗಳೊಂದಿಗೆ ಅಧಿಕಾರಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ಈಗ ಪ್ರಕರಣ ಹೆಚ್ಚಿದರೂ ಮೊದಲಿನಷ್ಟು ತೀವ್ರತೆ ಇಲ್ಲ. ಆದರೂ ಎಚ್ಚರಿಕೆ ವಹಿಸಲೇಬೇಕು ಎಂದರು.

Join Whatsapp
Exit mobile version