Home ಟಾಪ್ ಸುದ್ದಿಗಳು ʼಒಂದು ದೇಶ, ಒಂದು ರೇಶನ್‌ʼ ಯೋಜನೆ ಜು.31ರೊಳಗೆ ಜಾರಿಯಾಗಬೇಕು : ಸುಪ್ರೀಂ ಕೋರ್ಟ್‌

ʼಒಂದು ದೇಶ, ಒಂದು ರೇಶನ್‌ʼ ಯೋಜನೆ ಜು.31ರೊಳಗೆ ಜಾರಿಯಾಗಬೇಕು : ಸುಪ್ರೀಂ ಕೋರ್ಟ್‌

ನವದೆಹಲಿ : ʼಒಂದು ದೇಶ, ಒಂದು ರೇಶನ್‌ ಕಾರ್ಡ್‌ʼ ಯೋಜನೆಯನ್ನು ಜು.31ರೊಳಗೆ ಜಾರಿಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ನಿರ್ದೇಶಿಸಿದೆ. ಅಲ್ಲದೆ, ವಲಸೆ ಕಾರ್ಮಿಕರ ನೋಂದಣಿ ಅಕ್ಷಮ್ಯ ವಿಳಂಬದ ಬಗ್ಗೆ ಕೋರ್ಟ್‌ ಇದೇ ವೇಳೆ ತರಾಟೆಗೆ ತೆಗೆದುಕೊಂಡಿದೆ.

ʼಒಂದು ದೇಶ, ಒಂದು ರೇಶನ್‌ ಕಾರ್ಡ್‌ʼ ಯೋಜನೆಯಿಂದ ವಲಸೆ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಅವರು ದೇಶದ ಯಾವುದೇ ಪ್ರದೇಶದಲ್ಲಿ ತಾವು ಕೆಲಸ ಮಾಡುವ ಕಡೆಗಳಲ್ಲಿ ರೇಶನ್‌ ಪಡೆಯಲು ಈ ಯೋಜನೆಯ ಮೂಲಕ ಸಾಧ್ಯವಾಗಲಿದೆ.

ಅಸಂಘಟಿತ ವಲಯಗಳ ಕಾರ್ಮಿಕರನ್ನು ನೋಂದಣಿ ಮಾಡಲು ಸಾಫ್ಟ್‌ ವೇರ್‌ ಅಭಿವೃದ್ಧಿ ಪಡಿಸಲು ವಿಳಂಬವಾಗಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್‌, ಜು.31ರೊಳಗೆ ಸಾಫ್ಟ್‌ ವೇರ್‌ ಅಭಿವೃದ್ಧಿ ಪಡಿಸುವ ಕಾರ್ಯ ಪೂರ್ಣಗೊಳಿಸುವಂತೆ ಕೇಂದ್ರಕ್ಕೆ ನಿರ್ದೇಶಿಸಿದೆ.

ಕೇಂದ್ರ ಮತ್ತು ರಾಜ್ಯಗಳ ವಿವಿಧ ಯೋಜನೆಗಳ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಯೋಜನ ಪಡೆಯಲು ಅಸಂಘಟಿತ ವಲಯದ ಕಾರ್ಮಿಕರು ಕಾಯುತ್ತಿರಬೇಕಾದರೆ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ನಿರ್ಲಕ್ಷ್ಯ ಅಕ್ಷಮ್ಯವಾದುದು ಎಂದು ನ್ಯಾ. ಅಶೋಕ್‌ ಭೂಷಣ್‌ ಮತ್ತು ನ್ಯಾ. ಎಂ.ಆರ್.‌ ಶಾ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

ನೋಂದಣಿ ಪೂರ್ಣಗೊಳ್ಳದೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರದ ದೊಡ್ಡ ದೊಡ್ಡ ಅಭಿವೃದ್ಧಿ ಯೋಜನೆಯ ಘೋಷಣೆಗಳು ಪತ್ರದಲ್ಲಿ ಮಾತ್ರ ಉಳಿಯಲಿದೆ ಎಂದು ಕೋರ್ಟ್‌ ತಿಳಿಸಿದೆ.   

Join Whatsapp
Exit mobile version