Home ಟಾಪ್ ಸುದ್ದಿಗಳು ಗುಜರಾತ್ । ರಾಮನವಮಿ ಮೆರವಣಿಗೆ ವೇಳೆ ಇತ್ತಂಡಗಳ ನಡುವೆ ಘರ್ಷಣೆ; ಓರ್ವ ಬಲಿ

ಗುಜರಾತ್ । ರಾಮನವಮಿ ಮೆರವಣಿಗೆ ವೇಳೆ ಇತ್ತಂಡಗಳ ನಡುವೆ ಘರ್ಷಣೆ; ಓರ್ವ ಬಲಿ

ಸಬರ್ಕಾಂತ (ಗುಜರಾತ್): ಭಾನುವಾರ ನಡೆದ ರಾಮನವಮಿ ಮೆರವಣಿಗೆ ವೇಳೆ ಉಭಯ ಸಮುದಾಯಗಳ ನಡುವೆ ಘರ್ಷಣೆ ಏರ್ಪಟ್ಟು, ಒಬ್ಬರು ಬಲಿಯಾದ ಘಟನೆ ಗುಜರಾತಿನ ಖಂಭತ್ ನಗರದಲ್ಲಿ ವರದಿಯಾಗಿದೆ. ಈ ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ ಗುಜರಾತಿನ ಹಿಮ್ಮತ್ ನಗರದಲ್ಲಿ ಕೂಡ ಎರಡು ಸಮುದಾಯಗಳ ಸದಸ್ಯರ ಹಿಂಸಾಚಾರ ಭುಗಿಲೆದ್ದಿದ್ದು, ಸ್ಥಳದಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಲಾಗಿದೆ.

ರಾಮನವಮಿ ಪ್ರಯುಕ್ತ ಆಚರಣೆಯ ಪ್ರಯುಕ್ತ ನಡೆಸುವ ಮೆರವಣಿಗೆ ವೇಳೆ ನಡೆದ ಘರ್ಷಣೆಯಲ್ಲಿ ಸುಮಾರು 65 ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆಂದು ಆನಂದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜೀತ್ ರಾಜ್ಯನ್ ತಿಳಿಸಿದ್ದಾರೆ.

ಘರ್ಷಣೆಯ ಹಿನ್ನೆಲೆಯಲ್ಲಿ ಈ ಎರಡೂ ಸ್ಥಳಗಳಲ್ಲಿ ಇತ್ತಂಡಗಳು ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವ ಕಾರ್ಯದಲ್ಲಿ ತೊಡಗಿದ್ದವು ಮತ್ತು ಪರಿಸ್ಥಿತಿಯ ನಿಯಂತ್ರಣಕ್ಕೆ ಪೊಲೀಸರು ಅಶ್ರುವಾಯು ಸೆಲ್ ಪ್ರಯೋಗಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಘರ್ಷಣೆಯ ಸ್ವಲ್ಪ ಸಮಯದ ಬಳಿಕ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು ಎಂದು ಸಬರ್ಕಾಂತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಲಾಲ್ ವಘೇಲಾ ತಿಳಿಸಿದ್ದಾರೆ.

ಉಭಯ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version