Home ಟಾಪ್ ಸುದ್ದಿಗಳು ಬೂಸ್ಟರ್ ಡೋಸ್ ಗೆ ಸಾರ್ವಜನಿಕ ವಲಯದಲ್ಲಿ ನೀರಸ ಸ್ಪಂದನೆ

ಬೂಸ್ಟರ್ ಡೋಸ್ ಗೆ ಸಾರ್ವಜನಿಕ ವಲಯದಲ್ಲಿ ನೀರಸ ಸ್ಪಂದನೆ

ಹೊಸದಿಲ್ಲಿ: 2 ನೇ ಡೋಸ್ ವ್ಯಾಕ್ಸಿನ್ ಪಡೆದು ಒಂಬತ್ತು ತಿಂಗಳು ಪೂರ್ಣಗೊಂಡ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ     ಬೂಸ್ಟರ್ ಡೋಸ್ ಪಡೆಯುವಂತೆ ಕೇಂದ್ರ ಸರ್ಕಾರ ಆಜ್ಞೆ ಹೊರಡಿಸಿದ್ದು,  ಸಾರ್ವಜನಿಕ ವಲಯದಲ್ಲಿ ಮೊದಲ ದಿನವೇ ನೀರಸ ಸ್ಪಂದನೆ ಕಂಡುಬಂದಿದೆ.

ಮೊದಲ ದಿನ ದೇಶಾದ್ಯಂತ 850 ಖಾಸಗಿ ಆಸ್ಪತ್ರೆಗಳು ಲಸಿಕೆ ನೀಡಿದ್ದು, ಕೇವಲ 9,496 ಮಂದಿ ಲಸಿಕೆ ಪಡೆದಿದ್ದಾರೆ ಎಂದು ಕೋವಿನ್ ಡ್ಯಾಶ್‍ ಬೋರ್ಡ್ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಭಾರತದಾದ್ಯಂತ ಶೇಕಡ 82.9ರಷ್ಟು ಮಂದಿ ಎರಡೂ ಡೋಸ್ ಪಡೆದಿದ್ದು, ಶೇಕಡ 95.7ರಷ್ಟು ಮಂದಿ ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. ಈ ನಿಟ್ಟಿನಲ್ಲಿ ಎಸ್ಐಐ ಹಾಗೂ ಭಾರತ್ ಬಯೋಟೆಕ್, ಕ್ರಮವಾಗಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ದರವನ್ನು ರೂ. 225ಕ್ಕೆ ಇಳಿಸಿದ್ದವು.

ಖಾಸಗಿ ಆಸ್ಪತ್ರೆಗಳು ಈಗಾಗಲೇ ಹಿಂದಿನ ದುಬಾರಿ ದರಕ್ಕೆ ಲಸಿಕೆಗಳನ್ನು ಖರೀದಿಸಿರುವ ಹಿನ್ನೆಲೆಯಲ್ಲಿ, ಪರಿಷ್ಕೃತ ದರದಲ್ಲೇ ಲಸಿಕೆ ನೀಡುವಂತೆ ಲಸಿಕೆ ಉತ್ಪಾದನಾ ಕಂಪನಿಗಳು ಹೇಳಿದ್ದು, ಬೆಲೆ ವ್ಯತ್ಯಾಸವನ್ನು ಆಸ್ಪತ್ರೆಗಳಿಗೆ ಭರಿಸಲಾಗುವುದು ಎಂದು ಕಂಪನಿಗಳು ಸ್ಪಷ್ಟಪಡಿಸಿವೆ.

ಲಸಿಕಾ ಕಂಪನಿಗಳು ನಿಗದಿಪಡಿಸಿದ ಬೆಲೆಯ ಜತೆಗೆ ರೂ. 150ನ್ನು ಸೇವಾ ಶುಲ್ಕವಾಗಿ ಖಾಸಗಿ ಆಸ್ಪತ್ರೆಗಳು ಪಡೆಯಲು ಅವಕಾಶವಿದೆ. ಈ ಹಿಂದೆ ಕೋವಿಶೀಲ್ಡ್ ದರ ರೂ. 600 ಹಾಗೂ ಕೊವ್ಯಾಕ್ಸಿನ್ ದರ ರೂ. 1200 ಆಗಿತ್ತು.

Join Whatsapp
Exit mobile version